ಧರ್ಮಸ್ಥಳದ ಬುರುಡೆ ಕೇಸ್: ಕೇರಳದ ಯುಟ್ಯೂಬರ್‌ಗೆ ಎಸ್‌ಐಟಿ ನೋಟಿಸ್

Views: 58
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ, ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್ ನನ್ನು ಎಸ್ಐಟಿ ವಿಚಾರಣೆ ನಡೆಸಿದೆ. ಈ ಮಧ್ಯೆ ಬುರುಡೆ ಕಥೆಯನ್ನು ಕೇರಳಕ್ಕೆ ಹಬ್ಬಿಸಿದ್ದ ಕೇರಳ ಮೂಲದ ಯೂಟ್ಯೂಬರ್ ಮನಾಫ್ ಗೆ ಎಸ್ಐಟಿ ನೋಟಿಸ್ ನೀಡಿದೆ.
2024 ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಈ ಮನಾಫ್ ಅದೇ ಲಾರಿಯ ಮಾಲೀಕ ಹಾಗೂ ಕೇರಳ ಭಾಗದ ಯೂಟ್ಯೂಬರ್ ಆಗಿದ್ದಾನೆ.
ಕೇರಳ ಮೂಲದ ಯೂಟ್ಯೂಬರ್ ಮನಾಫ್, ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ತನ್ನ ಯೂಟ್ಯೂಬ್ನಲ್ಲಿ ಸುಳ್ಳು ಕಥೆ ಕಟ್ಟಿ ಹರಿಯಬಿಟ್ಟಿದ್ದ. ಜಯಂತ್ ಟಿ. ಮೂಲಕ ಬುರುಡೆ ಕಥೆಯನ್ನು ಕೇರಳಕ್ಕೂ ಹಬ್ಬಿಸಿದ್ದ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿ ಹೂಳಲಾಗಿದೆ ಎಂದು ಪ್ರಚಾರ ಮಾಡಿದ್ದ.
ಕಾಡಿನಿಂದ ಬುರುಡೆ ತಂದಿರುವ ಒರಿಜಿನಲ್ ವಿಡಿಯೋ ಮನಾಫ್ ಯುಟ್ಯೂಬ್ನಲ್ಲಿ ಜುಲೈ 11 ರಂದು ಅಪ್ಲೋಡ್ ಆಗಿತ್ತು. ಬಂಗ್ಲೆಗುಡ್ಡೆಯಿಂದಲೇ ಬುರುಡೆ ತಂದಿರುವುದಾಗಿ ಜಯಂತ್ ಟಿ. ಹೇಳಿದ್ದಾರೆ. ಕಾಡು ಪ್ರದೇಶದಲ್ಲಿ ಶೂಟ್ ಮಾಡಿರುವ ವಿಡಿಯೋ ಇದಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಪತ್ತೆಯಾಗಿರುವ ಬುರುಡೆಯನ್ನು ಕತ್ತಿ ಮೂಲಕ ಎತ್ತಿಕೊಂಡು ತಂದಿರುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ಆದರೆ ಈ ಬುರುಡೆಯನ್ನು ಅಲ್ಲಿಂದ ತಂದಂತೆ ತೋರಿಸಲಾಗಿದೆ ಎಂದು ತರ್ಕಿಸಲಾಗಿದೆ.