ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಆಚರಣೆ

Views: 233
ಕನ್ನಡ ಕರಾವಳಿ ಸುದ್ದಿ: ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ಹಾಗೂ ಸಾಂಸ್ಕೃತಿಕ ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಜಂಟಿ ಕಾರ್ಯಾನಿರ್ವಾಹಕಿ ಶ್ರೀಮತಿ ಅನುಪಮಾ ಎಸ್. ಶೆಟ್ಟಿ ಅವರು ಗೋ ಪೂಜೆ ನೆರವೇರಿಸುವ ಮೂಲಕ ಆರಂಭಿಸಿ ,ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶ್ರೀಕೃಷ್ಣನ ಬಾಲಲೀಲೆಗಳ ಮಹತ್ವ ಹಾಗೂ ಈ ಹಬ್ಬದ ಆಚರಣೆಗಳು ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿ, ಎಲ್ಲರಿಗೂ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಶಶಿಕಲಾ ರಾಜವರ್ಮ, ಮಾಜಿ ಪ್ರಾಂಶುಪಾಲೆ – ಮಾಧವ್ ಕೃಪಾ ಶಾಲೆ ಹಾಗೂ ಅಧ್ಯಕ್ಷೆ – ರೋಟರಿ ಕ್ಲಬ್ ಮಣಿಪಾಲ ಅವರು ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳನ್ನು ಮೆಚ್ಚಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂಸ್ಕೃತಿಪರ ಅರಿವು ಮೂಡಿಸುತ್ತವೆ, ಈ ನಿಟ್ಟಿನಲ್ಲಿ ಪೋಷಕರು ದಿನದ ಒಂದಿಷ್ಟು ಸಮಯವನ್ನು ಮಕ್ಕಳ ಜೊತೆ ಕಳೆಯಬೇಕು ಆ ಮೂಲಕ ಶಾಲೆಯಲ್ಲಿ ನಡೆಯುವ ಪ್ರತಿ ವಿಚಾರಗಳನ್ನು ಕೇಳಿ ತಿಳಿದಾಗ, ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತಾ ಮುಂದೆ ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುದೃಢರಾಗಿ ಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆ, ನಿಟ್ಟಿನಲ್ಲಿ ಶಾಲೆಯ ಇಂದಿನ ಆಚರಣೆ ನಿಜಕ್ಕೂ ಮಹತ್ವಪೂರ್ಣ ಹಾಗೂ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ಮಕ್ಕಳ ಪಾಲ್ಗೊಳ್ಳುವಿಕೆ ಹಾಗೂ ಪೋಷಕರ ಸಹಕಾರವನ್ನು ಕೊಂಡಾಡಿ, ಇಂತಹ ಹಬ್ಬಗಳು ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು, ಭಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷ್ಣ-ರಾಧೆಯ ವೇಷಭೂಷಣ ಧರಿಸಿ ನೃತ್ಯ ಗೋಳನ್ನು ಮಾಡಿದರೆ, ಶಿಕ್ಷಕಿಯರು ಭಜನೆ ಹಾಗೂ ನೃತ್ಯದ ಮೂಲಕ ಶ್ರೀಕೃಷ್ಣನ ಬಾಲಲೀಲೆಗಳನ್ನು ಮನೋಜ್ಞವಾಗಿ ಚಿತ್ರಿಸಿದರು.
ಕಾರ್ಯಕ್ರಮದ ವಿಶೇಷವಾಗಿ ಗೋ ಪೂಜೆ, ಮೊಸರು ಕುಡಿಕೆ ಹಾಗೂ ಅತ್ಯುತ್ತಮ ರಾಧಾ, ಕೃಷ್ಣ ಮತ್ತು ಯಶೋಧ ವೇಷಭೂಷಣಕ್ಕೆ ಬಹುಮಾನ ನೀಡಲಾಯಿತು .
ಕಾರ್ಯಕ್ರಮವನ್ನು ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀಮತಿ ವಿಜಯಲಕ್ಷ್ಮೀ ನಿರೂಪಿಸಿ, ವಂದಿಸಿದರು. ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳಿಕೆಯಿಂದ ಈ ಆಚರಣೆ ಭಕ್ತಿ, ಸಂತೋಷ ಮತ್ತು ಸಾಂಸ್ಕೃತಿಕ ಶ್ರದ್ಧೆಯಿಂದ ಕೂಡಿದ ಉತ್ಸವವಾಗಿ ಯಶಸ್ವಿಯಾಯಿತು.