ಆರ್‌ಬಿಐ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ!

Views: 24
ಕನ್ನಡ ಕರಾವಳಿ ಸುದ್ದಿ: ರಾಜಧಾನಿ ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಬೆದರಿಕೆ ಆತಂಕಕ್ಕೆಡೆ ಮಾಡಿಕೊಟ್ಟಿದ್ದು, ಆರ್‌ಬಿಐ ಕಚೇರಿಗೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ರಷ್ಯನ್ ಭಾಷೆಯಲ್ಲಿ ಬರೆಯಲಾಗಿರುವ ಬೆದರಿಕೆ ಪತ್ರವನ್ನು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ರವಾನಿಸಲಾಗಿದೆ. ಒಂದು ತಿಂಗಳ ಅವಧಿಯಲ್ಲಿ 2ನೇ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆರ್‌ಬಿಐ ಕಚೇರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಬೆದರಿಕೆಯ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಆರ್‌ಬಿಐ ಕಟ್ಟಡದ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಳಕ್ಕೆ ದೌಡಾಯಿಸಿರುವ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಶೋಧ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮುನ್ನೆಚ್ಚೆರಿಕೆ ಕ್ರಮವಾಗಿ ಆರ್‌ಬಿಐ ಕಚೇರಿಗೆ ಭದ್ರತೆ ಒದಗಿಸಲಾಗಿದೆ.
ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ನಂತರ, ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾತಾ ರಮಾಬಾಯಿ ಅಂಬೇಡ್ಕರ್ -ಎಂಆರ್‌ಎ ಮಾರ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆದರಿಕೆ ಇಮೇಲ್ ಸ್ವೀಕರಿಸಿದೆ. ರಷ್ಯನ್ ಭಾಷೆಯಲ್ಲಿ ಬರೆದ ಇಮೇಲ್, ಸೆಂಟ್ರಲ್ ಬ್ಯಾಂಕ್ ಅನ್ನು ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ.
ಇಮೇಲ್‌ನ ಮೂಲ ಮತ್ತು ಅದರಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಸಂಪೂರ್ಣ ತನಿಖೆ ಪ್ರಾರಂಭಿಸಿದ್ದಾರೆ.
“ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ರಷ್ಯನ್ ಭಾಷೆಯಲ್ಲಿದೆ, ಬ್ಯಾಂಕ್ ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ. ಮಾತಾ ರಮಾಬಾಯಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ವಿಷಯವು ನಡೆಯುತ್ತಿದೆ, ”ಎಂದು ವಲಯ 1 ರ ಡಿಸಿಪಿ ತಿಳಿಸಿದ್ದಾರೆ.
ನವೆಂಬರ್ 16ರಂದು ಆರ್‌ಬಿಐನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ’ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಿಇಒ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಕರೆ ಕಟ್ ಮಾಡುವುದಕ್ಕೂ ಮೊದಲು ಹಾಡು ಹಾಡಿದ್ದ ಎಂದು ವರದಿಯಾಗಿತ್ತು ಎಂದು ಹೇಳಲಾಗಿದೆ