ತನ್ನ ನಾಲ್ವರು ವಿಶೇಷಚೇತನ ಪುತ್ರಿಯರೊಂದಿಗೆ ಆತ್ಮಹತ್ಯೆಗೆ ಶರಣಾದ ತಂದೆ

Views: 124
ದೆಹಲಿ:ತಂದೆಯೊಬ್ಬ ತನ್ನ ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದುರಂತವೊಂದು ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ನಾಲ್ವರು ಪುತ್ರಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ದೆಹಲಿಯ ರಂಗಪುರಿ ಪ್ರದೇಶದಲ್ಲಿ ನಡೆದಿದೆ.
ಮನಕಲುಕುವ ಘಟನೆ: ತಂದೆಯೊಬ್ಬರು ತನ್ನ ನಾಲ್ವರು ವಿಕಲಚೇತನ ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಕ್ಕಳ ತಾಯಿ ಈಗಾಗಲೇ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. ಶುಕ್ರವಾರ ತಡರಾತ್ರಿ ಪೊಲೀಸರು ಮನೆಯ ಬೀಗ ಒಡೆದು ಎಲ್ಲಾ ಶವಗಳನ್ನು ಹೊರತೆಗೆದಿದ್ದಾರೆ. ಹೆಣ್ಣು ಮಕ್ಕಳನ್ನು ಪೋಷಿಸಲಾಗದ ಕಾರಣ ತಂದೆ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ತಂದೆಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಅವರು ರಂಗಪುರಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೂಲತಃ ಬಿಹಾರದ ಛಪ್ರಾ ಜಿಲ್ಲೆಯ ನಿವಾಸಿ. ಅವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದರು. ವಸಂತ್ ಕುಂಜ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ಅವರ ಮಹಡಿಯಿಂದ ದುರ್ವಾಸನೆ ಬರಲು ಪ್ರಾರಂಭಿಸಿದ ನಂತರ, ನೆರೆಹೊರೆಯವರು ಘಟನೆಯ ಬಗ್ಗೆ ಮನೆಯ ಮಾಲೀಕರಿಗೆ ತಿಳಿಸಿದ್ದರು. ಬಳಿಕ ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರು ಮಹಡಿಯ ಬಾಗಿಲು ಒಡೆದು ನೋಡಿದಾಗ ಒಳಗೆ ಐದು ಶವಗಳು ಪತ್ತೆಯಾಗಿವೆ. ಎರಡ್ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿ ಮೂರ್ನಾಲ್ಕು ದಿನಗಳಿಂದ ಜನರ ಕಣ್ಣಿಗೆ ಕಂಡಿರಲಿಲ್ಲ. ಹಾಗಾಗಿ ಆತನ ಸಹೋದರನಿಗೆ ಮಾಹಿತಿ ನೀಡಲಾಗಿತ್ತು. ಘಟನಾ ಸ್ಥಳದಿಂದ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಘಟನೆಯ ನಂತರ ಸ್ಥಳೀಯ ಪೊಲೀಸರೊಂದಿಗೆ ವಿಧಿವಿಜ್ಞಾನ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದೆ. ಎಲ್ಲಾ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






