ಆರೋಗ್ಯ

ಕೋಲ್ಕತಾ ವೈದ್ಯೆಅತ್ಯಾಚಾರ, ಕೊಲೆ ಹಿಂದೆ ಔಷಧ ಮಾಫಿಯಾ?

Views: 179

ಕೋಲ್ಕತಾ ಇಲ್ಲಿನ ಪ್ರತಿಷ್ಠಿತ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಮಹಿಳಾ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಹಿಂದೆ ಔಷಧ ಕಳವಿನ ಮಾಫಿಯಾದ ಕೈವಾಡವಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಒಂದು ವೇಳೆ ಇದು ನಿಜವಾದರೆ ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆ. ಹತ್ಯೆಗೊಳಗಾದ ವೈದ್ಯೆಯು ತನ್ನ ಡೈರಿಯಲ್ಲಿ ದಾಖಲಿಸಿರುವ ಕೆಲ ಅಂಶಗಳು, ವೈದ್ಯೆಯ ಸಹೋದ್ಯೋಗಿಗಳು ಮತ್ತು ಪೋಷಕರು ನೀಡಿರುವ ಹೇಳಿಕೆಗಳಿಂದ ಸುಳಿವು ಸಿಕ್ಕಿವೆ.

ಇದು ಸರಳವಾದ ಅಪರಾಧ ಪ್ರಕರಣವಲ್ಲ. ಉದ್ದೇಶಪೂರ್ವಕ ಕೃತ್ಯದಂತಿದೆ ಎಂದು ಇವರೆಲ್ಲರೂ ಶಂಕಿಸಿದ್ದಾರೆ. ‘ಆಕೆ 48 ಗಂಟೆಗಳ ನಿರಂತರ ಪಾಳಿ ಸೇರಿದಂತೆ ಭಾರೀ ಕೆಲಸದ ಒತ್ತಡದಲ್ಲಿದ್ದಳು. ಜೊತೆಗೆ ಘಟನೆ ನಡೆದ ದಿನ ಸಂತ್ರಸ್ತೆ ಸೆಮಿನಾರ್ ಹಾಲ್‌ನಲ್ಲಿ ಒಬ್ಬಳೇ ಇರುವುದು ಬಂಧಿತ ಆರೋಪಿ ಸಂಜಯ್ ರಾಯ್‌ಗೆ ಹೇಗೆ ಗೊತ್ತಾಯಿತು. ರಾಯ್‌ ಒಂದು ದೊಡ್ಡ ಜಾಲದಲ್ಲಿನ ಭಾಗವಾಗಿರಬಹುದು ಅಷ್ಟೆ’ ಎಂದು ಒಬ್ಬ ಸಹೋದ್ಯೋಗಿ ಸಂದೇಹಿಸಿದ್ದಾರೆ.

ಇನ್ನೊಬ್ಬ ಸಹೋದ್ಯೋಗಿ ಮಾತನಾಡಿ, ‘ಸಂತ್ರಸ್ತೆಯು ತನ್ನ ಇಲಾಖೆಯಲ್ಲಿ ಸಂಭವನೀಯ ಡ್ರಗ್ಸ್‌ ಜಾಲ ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದಳು. ಆಕೆಗೆ ತುಂಬಾ ತಿಳಿದಿರಬಹುದು. ಹೀಗಾಗಿ ಆಕೆಯನ್ನು ಕೊಂದಿರಬಹುದು’ ಎಂದಿದ್ದಾರೆ. ಮೃತ ವೈದ್ಯರ ತಾಯಿ ಮಾತನಾಡಿ, ದಾಳಿಗೆ ಕೆಲವು ದಿನ ಮುನ್ನ ನನ್ನ ಮಗಳು ಆಸ್ಪತ್ರೆಗೆ ಹೋಗುವ ಬಗ್ಗೆ ಇಷ್ಟವಿರಲಿಲ್ಲ ಎಂದಿದ್ದಳು ಎಂದರೆ, ಸಂತ್ರಸ್ತೆಯ ತಂದೆ ತನ್ನ ಮಗಳನ್ನು ಸೆಮಿನಾರ್ ಹಾಲ್‌ನಲ್ಲಿ ಕೊಲ್ಲಲಾಗಿದೆಯೇ ಎಂಬುದೇ ಸಂದೇಹಾಸ್ಪದ. ಅವಳು ಬೇರೆಡೆ ಕೊಲ್ಲಲ್ಪಟ್ಟಿರಬಹುದು ಎಂದು ಶಂಕಿಸಿದ್ದಾರೆ.

Related Articles

Back to top button