ಹಿಂದೂ ಗೆಳೆಯನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ ತಂಗಿಯ ಕತ್ತು ಹಿಸುಕಿ ಕೊಂದ ಅಣ್ಣ!

Views: 402
ಹಿಂದೂ ಗೆಳೆಯನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ ತಂಗಿಯ ಕತ್ತು ಹಿಸುಕಿ ಕೊಂದ ಅಣ್ಣನನ್ನು ಬಂಧಿಸಿದ್ದಾರೆ.
ಆರೋಪಿಯನ್ನು 20 ವರ್ಷದ ಹಸೀನ್ ಎಂದು ಗುರುತಿಸಲಾಗಿದ್ದು, ಹಸೀನ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಸಹೋದರಿಯ ಕೊಲೆ ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನಾಗ್ಲಾ ಶೇಖು ಗ್ರಾಮದಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ.ಸಂತ್ರಸ್ತೆ ಮುಸ್ಲಿಂ ಕುಟುಂಬಕ್ಕೆ ಸೇರಿದವಳಾಗಿದ್ದು, ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಪೊಲೀಸರ ಮಾಹಿತಿ ಪ್ರಕಾರ, ಹುಡುಗಿ ಇತ್ತೀಚೆಗೆ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಪೊಲೀಸರು ಇಬ್ಬರನ್ನೂ ವಾಪಾಸು ಕರೆಸಿ ಕುಟುಂಬಕ್ಕೆ ಒಪ್ಪಿಸಿದ್ದಾರೆ.
ಸಮಾಜದಲ್ಲಿ ಮರ್ಯಾದೆಗೆ ಹೆದರಿ ಆಕೆ ಓಡಿಹೋದ ವ್ಯಕ್ತಿಯ ವಿರುದ್ಧ ಕುಟುಂಬವು ದೂರು ದಾಖಲಿಸಿಲ್ಲ ಎನ್ನಲಾಗಿದೆ. ಕುಟುಂಬದವರು ಅವಳಿಗೆ ಎಷ್ಟೇ ಬುದ್ಧಿ ಹೇಳಿದರೂ ಆಕೆ ತನ್ನ ಹಿಂದೂ ಗೆಳೆಯನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಹಾಗಾಗಿ ಆಕೆಯ ನಡವಳಿಕೆಯಿಂದ ಬೇಸರಗೊಂಡ ಕುಟುಂಬದವರು ಆಕೆಗೆ ಬೇರೆಯವರೊಂದಿಗೆ ಮದುವೆ ಮಾಡಿಸಲು ವ್ಯವಸ್ಥೆ ಮಾಡಿದರು. ಆದರೆ ಅವಳು ತನ್ನ ಪ್ರೇಮಿಯನ್ನು ಮದುವೆಯಾಗುವ ನಿರ್ಧಾರ ಮಾಡಿ ಬುಧವಾರ, ಅವಳು ಮತ್ತೆ ಅವನೊಂದಿಗೆ ಓಡಿಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಅವಳ ಸಹೋದರ ಅವಳನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ಅವನ ಮಾತು ಕೇಳದೆ ಆಕೆ ಮನೆಯಿಂದ ಹೊರಗೆ ಓಡಿದ್ದಾಳೆ. ಆದರೆ ಅವಳ ಸಹೋದರ ಅವಳನ್ನು ಬೆನ್ನಟ್ಟಿ ನಡು ರಸ್ತೆಯಲ್ಲಿ ಅವಳಿಗೆ ಹೊಡೆದು ನಂತರ ಜನರ ಸಮ್ಮುಖದಲ್ಲಿ ಅವಳ ಕತ್ತು ಹಿಸುಕಿ ಕೊಂದಿದ್ದಾನೆ
ಘಟನೆಯ ವೈರಲ್ ವಿಡಿಯೊದಲ್ಲಿ ಸಂತ್ರಸ್ತೆ ರಸ್ತೆಯಲ್ಲಿ ಮಲಗಿದ್ದರೆ, ಆರೋಪಿ ಅವಳನ್ನು ಕತ್ತು ಹಿಸುಕುತ್ತಿದ್ದಾನೆ. ಜನರು ಸುತ್ತಲೂ ನಿಂತು ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾರೆ. ಆರೋಪಿಗಳನ್ನು ತಡೆಯಲು ಯಾರೂ ಮುಂದಾಗುವುದಿಲ್ಲ. ಕೆಲವು ಮಕ್ಕಳು ಸಹ ಹತ್ತಿರದಲ್ಲಿ ನಿಂತು, ಆರೋಪಿ ತನ್ನ ಸಹೋದರಿಯನ್ನು ಕತ್ತು ಹಿಸುಕುವುದನ್ನು ನೋಡುತ್ತಿದ್ದಾರೆ. ವಿಡಿಯೊದಲ್ಲಿ, ಆರೋಪಿ, ಈಕೆ ಮೂರು ಬಾರಿ ಮನೆಯಿಂದ ಓಡಿ ಹೋಗಿ ತನ್ನ ತಂದೆಯ ಮರ್ಯಾದೆ ತೆಗೆದಿದ್ದಳೆ. ಅದು ಅವರ ಸಾವಿಗೆ ಕಾರಣವಾಗಬಹುದು ಎಂದು ತಾನು ಹೀಗೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.






