ಧಾರ್ಮಿಕ

ಬಸ್ರೂರಿನಲ್ಲಿ ದಾಸಯ್ಯ ರಾತ್ರಿ ಉಳಿದುಕೊಳ್ಳುವುದಿಲ್ಲ ಯಾಕೆ?

Views: 11

ಇಂದಿನ ಬಸ್ರೂರು ಹಿಂದಿನ ‘ವಸುಪುರ’ವಾಗಿತ್ತಂತೆ. ವಸುಪುರದ ದೊರೆ ವಸು ಮಹಾರಾಜ. ವಸುಪುರದ ಸುತ್ತಲೂ ಕೋಟೆಯನ್ನು ಕಟ್ಟಿ, ಗುಪ್ತ ದ್ವಾರವನ್ನು ನಿರ್ಮಿಸಿ, ಹೊರಗಿನವರು ದಾಳಿ ಮಾಡಲು ಅವಕಾಶ ಇರದಂತೆ ಭದ್ರ ರಕ್ಷಣಾ ವ್ಯವಸ್ಥೆ ಮಾಡಿದ್ದ. ಏಳು ಕೇರಿಗಳು ಮತ್ತು ಏಳು ಕೆರೆಗಳನ್ನು ಹೊಂದಿದ್ದ ವಸುಪುರ ಮಾದರಿ ರಾಜ್ಯವಾಗಿತ್ತು. ವಸುರಾಜ ಶಿವನ ಪರಮ ಭಕ್ತನಾಗಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಮೊದಲೇ ಎದ್ದು ವಾರಾಹಿ ನದಿಯ ದಡವನ್ನು ಸೇರಿ, ಹುತ್ತದ ಮಣ್ಣಿನಿಂದ ಶಿವಲಿಂಗ ನಿರ್ಮಾಣ ಮಾಡಿ, ಶಿವನ ಪೂಜೆಯನ್ನು ಸಾಂಗವಾಗಿ ನೆರವೇರಿಸಿ, ಬಳಿಕ ವಾರಾಹಿ ನದಿಯಲ್ಲಿ ಶಿವಲಿಂಗದ ವಿಸರ್ಜನೆ ಮಾಡಿ ಅರಮನೆಯನ್ನು ಸೇರಿಕೊಳ್ಳುವುದು ಅವನ ದಿನಚರಿಯಾಗಿತ್ತು. ಪ್ರಜೆಗಳನ್ನು ತನ್ನ ಮಕ್ಕಳಂತೆ ತುಂಬ ಪ್ರೀತಿಯಿಂದ ಪಾಲಿಸುತ್ತಿದ್ದ. ಅವನ ರಾಜ್ಯಭಾರದಲ್ಲಿ ಯಾವ ಕೊರತೆಯೂ ಇರಲಿಲ್ಲ. ಆದರೆ ತನಗೆ ಮಕ್ಕಳಿಲ್ಲ ಎಂಬ ಕೊರಗು, ಕೊರತೆ ಅವನನ್ನು ಕಾಡುತ್ತಿತ್ತು.

ಅರಸನ ದುಗುಡವನ್ನು ಅರಿತುಕೊಂಡ ಕುಲಪುರೋಹಿತರು “ನೀನು ಕೋಟೇಶ್ವರದ ಕೋಟಿಲಿಂಗೇಶ್ವರನಿಗೆ ದೇವಸ್ಥಾನ ಕಟ್ಟಿಸಿದರೆ ನಿನಗೆ ಸಂತಾನ ಭಾಗ್ಯ ದೊರೆಯುತ್ತದೆ” ಎಂದು ಉಪದೇಶ ನೀಡಿದರು. ವಸು ಮಹಾರಾಜ ಅದೇ ರೀತಿ ಹರಕೆ ಹೊತ್ತುಕೊಂಡ. ಅವನಿಗೆ ಪುತ್ರ ಸಂತಾನ ಪ್ರಾಪ್ತಿಯೂ ಆಯಿತು. ಆಡಿದ ಮಾತಿನಂತೆ ಕೋಟಿಲಿಂಗೇಶ್ವರ ದೇವಸ್ಥಾನವೂ ನಿರ್ಮಾಣಗೊಂಡಿತು.

ಒಂದುದಿನ ಎಂದಿನಂತೆ ವಸುಮಹಾರಾಜ ವಾರಾಹಿ ನದೀತಟವನ್ನು ಸೇರಿ, ಹುತ್ತದ ಮಣ್ಣಿನಿಂದ ಶಿವಲಿಂಗ ರಚನೆ ಮಾಡಿ, ಭಕ್ತಿಯಿಂದ ಪೂಜಿಸಿ, ಕೊನೆಯಲ್ಲಿ ಶಿವಲಿಂಗ ವಿಸರ್ಜನೆ ಮಾಡುವುದನ್ನು ಮರೆತು, ಮಣ್ಣಿನ ಲಿಂಗವನ್ನು ಅಲ್ಲಿಯೇ ಬಿಟ್ಟು ಅರಮನೆಗೆ ಹೊರಟುಹೋದ. ಅದೇ ಸಮಯದಲ್ಲಿ ಗುಪ್ಪಿಯ ಸದಾನಂದ ಯತಿಗಳು ಅಲ್ಲಿಗೆ ಬಂದರು. ನದಿಯ ದಡದಲ್ಲಿದ್ದ ಮಣ್ಣಿನ ಶಿವಲಿಂಗವನ್ನು ನೋಡಿ ಕೋಪೋದ್ರಿಕ್ತರಾದರು. ಇಂತಹ ಅನಾಚಾರ ಮಾಡಿದ ವ್ಯಕ್ತಿಯನ್ನು ಶಪಿಸಲು ಮುಂದಾದರು. ಆಗ ಅವರ ಶಿಷ್ಯರು ಇಂತಹ ಅನಾಹುತಕ್ಕೆ ಕಾರಣನಾದವನು ವಸು ಮಹಾರಾಜ ಎಂದು ತಿಳಿಸಿದರು. ಶಿಷ್ಯರನ್ನು ಕೂಡಿಕೊಂಡು ಸದಾನಂದ ಯತಿಗಳು ಅರಮನೆಗೆ ಹೋಗಿ, ಮಹಾರಾಜನ ನಡತೆಯನ್ನು ಆಕ್ಷೇಪಿಸಿ, ಕೋಪದ ಪ್ರದರ್ಶನ ಮಾಡಿದರು. ಮಹಾರಾಜ ಅವರ ಕಾಲಿಗೆ ಬಿದ್ದು, “ಯಾವಾಗಲೂ ನನ್ನಿಂದ ನಡೆಯದ ಅಚಾತುರ್ಯ ನನಗೇ ತಿಳಿಯದೆ ಇಂದು ನಡೆದು ಹೋಗಿದೆ. ತಾವು ದೊಡ್ಡ ಮನಸ್ಸು ಮಾಡಿ ನನ್ನನ್ನು ಕ್ಷಮಿಸಿ, ಅದಕ್ಕೆ ಪ್ರಾಯಶ್ಚಿತ್ತವನ್ನು ಸೂಚಿಸಿ ನನ್ನನ್ನು ಕಾಪಾಡಬೇಕು” ಎಂದು ಬೇಡಿಕೊಂಡ. ಪಶ್ಚಾತ್ತಾಪ ಪಟ್ಟ ರಾಜನನ್ನು ನೋಡಿ ಸದಾನಂದ ಯತಿಗಳು ಸಮಾಧಾನ ಹೊಂದಿ, ಪ್ರಾಯಶ್ಚಿತ್ತ ರೂಪವಾಗಿ, ಕದ್ರಿಯಿಂದ ಶಿವಲಿಂಗ ತಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಟ್ಟಿಸಬೇಕೆಂದು ಹೇಳಿದರು. ಅದರಂತೆ ವಸುರಾಜ ಕದ್ರಿಗೆ ಹೋಗಿ ಪವಿತ್ರವಾದ ಶಿವಲಿಂಗವನ್ನು ತಂದು, ಅದರ ಪ್ರತಿಷ್ಠಾಪನೆಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸದಾನಂದ ಯತಿಗಳನ್ನು ಕೇಳಿಕೊಂಡ. ಯತಿಗಳು ಯೋಚನೆ ಮಾಡಿ, “ಶ್ರೀ ಮಹಾಲಿಂಗೇಶ್ವರನ ಪ್ರತಿಷ್ಠಾಪನೆಗೆ ಪ್ರಶಸ್ತವಾದ ಮುಹೂರ್ತ ನಾಳೆ ಬೆಳಗಿನ ಜಾವದಲ್ಲೇ ಇದೆ. ನೀವು ಎಲ್ಲಾ ತಯಾರಿ ಮಾಡಿಕೊಂಡು ಮುಹೂರ್ತದ ಸೂಚನೆಯನ್ನು ನಿರೀಕ್ಷೆ ಮಾಡುತ್ತಿರಿ. ಆ ಮುಹೂರ್ತ ಬರುವಾಗ ನಾನು ಶಂಖನಾದ ಮಾಡುತ್ತೇನೆ. ನೀವು ತಡಮಾಡದೆ ಶಿವಲಿಂಗ ಪ್ರತಿಷ್ಠಾಪನೆ ಮಾಡಿಬಿಡಿ” ಎಂದು ಹೇಳಿದರು. ಸದಾನಂದ ಯತಿಗಳ ಮಾರ್ಗದರ್ಶನದಲ್ಲಿ ಎಲ್ಲಾ ತಯಾರಿ ಮಾಡಿ, ಎಲ್ಲರೂ ಶಂಖನಾದದ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.

ಹಿಂದಿನ ದಿನ ಬಸ್ರೂರಿಗೆ ಬಂದಿದ್ದ ದಾಸಯ್ಯನೊಬ್ಬ ಅಂದಿನ ರಾತ್ರಿ ಅಲ್ಲೇ ಉಳಿದುಕೊಂಡಿದ್ದ. ಆ ರಾತ್ರಿಯೆಲ್ಲ ದಾಸಯ್ಯನಿಗೆ ನಿದ್ರೆ ಬರದೆ ಚಡಪಡಿಸುತ್ತಿದ್ದ. ಸೊಳ್ಳೆ ಕಾಟ ಬೇರೆ. ತಡೆಯಲಾಗದ ದಾಸಯ್ಯನಿಗೆ ಏನೆನ್ನಿಸಿತೋ ಏನೋ, ಇದ್ದಕ್ಕಿದ್ದ ಹಾಗೆ ತನ್ನ ಶಂಖವನ್ನು ಊದತೊಡಗಿದ. ಸದಾನಂದ ಯತಿಗಳ ಶಂಖನಾದವನ್ನೇ ಕಾಯುತ್ತಿದ್ದ ಮಹಾರಾಜ ತಡಮಾಡದೆ ಮಹಾಲಿಂಗೇಶ್ವರನ ಪ್ರತಿಷ್ಠಾಪನೆಯನ್ನು ಮಾಡಿ ಮುಗಿಸಿದ. ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಸುಂದರಿಯರಾದ ದೇವದಾಸಿಯರು ಶೃಂಗಾರ ಮಾಡಿಕೊಂಡು ಮಹಾಲಿಂಗನನ್ನು ಹೊಗಳುತ್ತಾ, ಹಾಡುತ್ತಾ, ನರ್ತನ ಮಾಡುತ್ತಾ, ಆರತಿ ಎತ್ತಿದರು:

“ಶೃಂಗಾರವಾದಾ ಬಾಲೆಯರೂ ಮಹಾಲಿಂಗಗೆ ಮಂಗಳಾರತಿ ಎತ್ತಿರೆ II ಮುತ್ತಿನಾಭರಣವನಿತ್ತು ಮುಡಿಯ ಕಟ್ಟಿ ಭಕ್ತಿಯಿಂ ನಲಿಯುತ್ತ ಬಂದು II ಚಿತ್ತಜಪಿತರಾಜ ದೇವ ಮಾಲಿಂಗಗೆ ಅರ್ತಿಯಿಂದಲಿ ಆರತಿ ಎತ್ತಿರೆ II ಶೃಂಗಾರವಾದಾ….. II ಗಂಗಾಧರಗೆ ಗೌರ್ವಿಷಕಂಠ ಭಾರ್ಯೆಗೆ ತುಂಬೆ ಗೌರಳ ಸಾಹಾ ನುಡಿವಾಳಿಗೆ II ಲಿಂಗಗೆ ವಸುಪುರದೊಳು ನೆಲಸಿದ ಮಹಾಲಿಂಗಗೆ ಮಂಗಳಾರತಿ ಎತ್ತಿರೆ II ಶೃಂಗಾರವಾದಾ ….. II”

ಎಲ್ಲಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಮ್ಮೆ ಶಂಖನಾದ ಕೇಳಿಸಿತು. ಇದು ಗೊಂದಲಕ್ಕೆ ಕಾರಣವಾಯಿತು. ಕಾರಣ ತಿಳಿಯದೆ ಎಲ್ಲರೂ ಗುಪ್ಪೆಯ ಸದಾನಂದ ಯತಿಗಳ ಬಳಿಗೆ ಓಡಿದರು. ನಡೆದ ವಿಷಯ ವಿವರಿಸಿದರು. ಯತಿಗಳ ದಿವ್ಯ ದೃಷ್ಟಿಗೆ ಎಲ್ಲವೂ ಗೋಚರವಾಯಿತು. ದಾಸಯ್ಯನಿಂದ ನಡೆದ ಅನಾಹುತ ಅರ್ಥಮಾಡಿಕೊಂಡರು. ಅವರು ಕೋಪದಿಂದ ದಾಸಯ್ಯನನ್ನು ಶಪಿಸಿದರಂತೆ: “ಶ್ರೀ ಧರ್ಮಸ್ಥಳದ ಮಂಜುನಾಥಸ್ವಾಮಿಯ ಪ್ರತಿಷ್ಠಾಪನೆಯ ಮುಹೂರ್ತವನ್ನೇ ಶ್ರೀ ಮಹಾಲಿಂಗೇಶ್ವರನ ಪ್ರತಿಷ್ಠಾಪನೆಗೆ ಆಯ್ಕೆ ಮಾಡಿಕೊಂಡಿದ್ದೆ. ಆದರೆ ಎಲ್ಲಿಂದಲೋ ಬಂದ ದಾಸಯ್ಯನ ಬೇಜವಾಬ್ದಾರಿಯಿಂದ ದೊಡ್ಡ ಅನಾಹುತ ನಡೆದುಹೋಯಿತು. ಎಲ್ಲವೂ ಸರಿಯಾಗಿ ನಡೆದಿದ್ದರೆ ಈ ಕ್ಷೇತ್ರವೂ ಧರ್ಮಸ್ಥಳದಷ್ಟೇ ಪ್ರಸಿದ್ಧಿ ಹೊಂದುತ್ತಿತ್ತು. ಇಷ್ಟು ದೊಡ್ಡ ಅನಾಹುತಕ್ಕೆ ಕಾರಣವಾದ ದಾಸಯ್ಯನವರು ಇನ್ನು ಮುಂದೆ ಈ ಊರಿನಲ್ಲಿ ರಾತ್ರಿ ಹೊತ್ತು ತಂಗಿಕೊಳ್ಳದಿರುವಂತೆ ಆಗಲಿ. ಅಂದಿನಿಂದ ಬಸ್ರೂರಿನಲ್ಲಿ ದಾಸಯ್ಯನವರು ರಾತ್ರಿ ಹೊತ್ತು ಉಳಿದುಕೊಳ್ಳುವುದಿಲ್ಲವಂತೆ. ಸೂರ್ಯಾಸ್ತಮಾನ ಆಗುವ ಮೊದಲು ಬಸ್ರೂರು ಬಿಟ್ಟು ಹೊರಟು ಹೋಗುತ್ತಾರಂತೆ.

ನಾರಾಯಣ ಶೆಟ್ಟಿಗಾರ್,ಬೆಂಗಳೂರು.

845660131

 

 

Related Articles

Back to top button
error: Content is protected !!