ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರನ್ನು ಹಿಡಿದ 60 ರ ವೃದ್ಧೆ!

Views: 155
ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






