ಎಮ್ಮೆ ಮೇಯಿಸಲು ಹೋದ ಮೂವರು ಗುಂಡಿಗೆ ಬಿದ್ದು ದಾರುಣ ಸಾವು

Views: 55
ವಿಜಯಪುರ: ಎಮ್ಮೆ ಮೇಯಿಸಲು ಹೋಗಿದ್ದ ಮೂವರು ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಸಾವನ್ನಪ್ಪಿರೋ ದಾರುಣ ಘಟನೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ.
ನೀಲಮ್ಮ ಖಿಲ್ಲಾರಹಟ್ಟಿ (16) ಮುತ್ತಪ್ಪ ಖಿಲ್ಲಾರಹಟ್ಟಿ ( 24 ) ಹಾಗೂ ಶಿವು ಯಾಳವಾರ ( 25 ) ಮೃತ ದುರ್ದೈವಿಗಳು.
ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಆಳವಾದ ಗುಂಡಿ ಇದ್ದು ನೀರು ತುಂಬಿತ್ತು. ಯುವತಿ ನೀಲಮ್ಮ ಎಮ್ಮೆ ಮೇಯಿಸಲು ಜಮೀನಿಗೆ ಹೋಗಿದ್ದಳು. ಎಮ್ಮೆಗೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಹೋದಾಗ ಕಾಲು ಜಾರಿ ಬಿದ್ದಿದ್ದಾಳೆ.
ನೀಲಮ್ಮ ಕಾಲು ಜಾರಿ ಬಿದ್ದಿದ್ದನ್ನು ಕಂಡ ಆಕೆಯ ಸಂಬಂಧಿ ಮುತ್ತಪ್ಪ ಖಿಲ್ಲಾರಹಟ್ಟಿ ರಕ್ಷಣೆ ಮಾಡಲು ಹೋಗಿದ್ದಾನೆ. ಯುವತಿ ಹಾಗೂ ಆಕೆಯ ಸಂಬಂಧಿ ನೀರಿನಲ್ಲಿ ಹೊರ ಬರಲಾರದೇ ಪರದಾಡುತ್ತಿದ್ದರು. ಇವನ್ನು ಕಂಡು ಕಾಪಾಡಲು ಬಂದ ಶಿವು ಯಾಳವಾರ ಅವರು ಸಹ ನೀರು ಪಾಲಾಗಿದ್ದಾರೆ ಎನ್ನಲಾಗಿದೆ
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಮೂವರ ಶವಗಳನ್ನು ಹೊರ ತೆಗೆದಿದ್ದು, ಹಡಲಗೇರಿ ಗ್ರಾಮದಲ್ಲಿ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.






