ವಾಯುಪಡೆ ಅಗ್ನಿವೀರ್ ನೇಮಕಾತಿ:ನೋಂದಣಿ, ವೇತನ ವಿವರ, ಯಾರು ಅರ್ಹರು?..ಇಲ್ಲಿದೆ ಮಾಹಿತಿ

Views: 103
ಬೆಂಗಳೂರು : ಭಾರತೀಯ ವಾಯುಪಡೆಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗ್ನಿಪಥ್ ಯೋಜನೆಯಡಿ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳು ಜುಲೈ 8ರಿಂದ 28ರ ತನಕ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
12ನೇ ತರಗತಿ ಪಾಸಾದವರು, ಡಿಪ್ಲೊಮಾ ಪದವೀಧರರು, ಕೈಗಾರಿಕಾ ತರಬೇತಿಯನ್ನು ಪಡೆದ ಅವಿವಾಹಿತ ಪುರುಷ, ಮಹಿಳಾ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ನೇಮಕಾತಿ, ಅರ್ಜಿ ಸಲ್ಲಿಕೆ ಹೇಗೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಥಮ ವರ್ಷ 30,000 ರೂ., 2ನೇ ವರ್ಷ 33 ಸಾವಿರ ರೂ., 3ನೇ ವರ್ಷ 36,500 ರೂ. ಮತ್ತು 4ನೇ ವರ್ಷ 40,000 ರೂ. ವೇತನ ನಿಗದಿ ಪಡಿಸಲಾಗಿದೆ. ವೇತನದಲ್ಲಿ ಮೊದಲು 9 ಸಾವಿರ, 2ನೇ ವರ್ಷ 9,900, 3ನೇ ವರ್ಷ 10,950 ಮತ್ತು 4ನೇ ವರ್ಷ 12 ಸಾವಿರ ರೂ.ಗಳನ್ನು ಸೇವಾ ನಿಧಿಗಾಗಿ ಸರ್ಕಾರ ನೀಡಲಿದೆ. 4 ವರ್ಷದ ಸೇವಾವಧಿ ಬಳಿಕ 10.4 ಲಕ್ಷ ರೂ.ಗಳನ್ನು ಬಡ್ಡಿ ಸಮೇತ ನೀಡಲಾಗುತ್ತದೆ.
ವಯೋಮಿತಿಯ ವಿವರ
ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು 3 ಜುಲೈ 2004 ಹಾಗೂ 3 ಜನವರಿ 2008ರ ನಡುವೆ ಜನಿಸಿರಬೇಕು. ಅಭ್ಯರ್ಥಿ ಎಲ್ಲಾ ಪರೀಕ್ಷಾ ಹಂತಗಳಲ್ಲಿ ತೇರ್ಗಡೆಯಾದರೆ ನೋಂದಣಿ ದಿನಕ್ಕೆ ಅನ್ವಯಿಸಿ ಗರಿಷ್ಠ 21 ವರ್ಷದ ತನಕ ವಯೋಮಿತಿ ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳ ನೋಂದಣಿ ಉಚಿತ. ಆದರೆ ಪರೀಕ್ಷಾ ಶುಲ್ಕ 550 ರೂ.ಗಳನ್ನು ಪಾವತಿ ಮಾಡಬೇಕಿದೆ.
ಆನ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 7 ನಿಮಿಷದಲ್ಲಿ 1.6 ಕಿ. ಮೀ. ಓಟ, ಮಹಿಳೆಯರಿಗೆ 8 ನಿಮಿಷ, ಪುಷ್ ಅಪ್, ಸಿಟ್ ಅಪ್ ಸ್ಟಾಟ್ಗಳನ್ನು ಮಾಡಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಗಳು ಸಹ ನಡೆಯಲಿವೆ.
ವಿದ್ಯಾರ್ಹತೆ ಏನು?
12ನೇ ತರಗತಿ, ಮೂರು ವರ್ಷಗಳ ಡಿಪ್ಲೊಮಾ, ಎರಡು ವರ್ಷಗಳ ಕೈಗಾರಿಕಾ ತರಬೇತಿ ಪಡೆದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಈ ವಿದ್ಯಾರ್ಹತೆ ಪಡೆದಿರಬೇಕು.
ಮೂರು ವಿಷಯಗಳಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಪಡೆದಿರಬೇಕು. 12ನೇ ತರಗತಿ ಪಾಸಾದವರು ಇಂಗ್ಲಿಶ್ ಭಾಷೆಯಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು. ಪುರುಷರು 152.5 ಹಾಗೂ ಮಹಿಳೆಯರು 152. ಸೆಂ. ಮೀ. ಎತ್ತರವಿರಬೇಕು
ಆಸಕ್ತ ಮತ್ತು ಅರ್ಹರು https://agnipathvayu.cdac.in/AV/ ವೆಬ್ಸೈಟ್ಗೆ ಭೇಟಿ ನೀಡಬಹುದು ಹೆಚ್ಚಿನ ಮಾಹಿತಿ ತಿಳಿಯಬಹುದು.








