ಕರಾವಳಿ

ಕುಂದಾಪುರ:ಸಹೋದ್ಯೋಗಿ ವೈದ್ಯೆಗೆ ಲೈಂಗಿಕ ಕಿರುಕುಳ, ರೋಗಿಗಳೊಂದಿಗೆ ದುರ್ನಡತೆ, ಪ್ರಕರಣ: ಡಾ. ರಾಬರ್ಟ್ ಸೇವೆಯಿಂದ ಅಮಾನತು

Views: 92

ಉಡುಪಿ: ಸಹೋದ್ಯೋಗಿ ವೈದ್ಯೆಗೆ ಲೈಂಗಿಕ ಕಿರುಕುಳ, ರೋಗಿಗಳೊಂದಿಗೆ ದುರ್ನಡತೆ, ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆಯ ಆಯುಕ್ತ ಡಾ.ರಂದೀಪ್ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ತನಿಖೆ ಮಾಡಿ ಸಲ್ಲಿಸಿದ ವರದಿಯಲ್ಲಿ ಡಾ.ರಾಬರ್ಟ್ ರೆಬೆಲ್ಲೋ ಅವರು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಯ ಮೇಲುಸ್ತುವಾರಿ ವಿಫಲತೆ, ಕರ್ತವ್ಯ ಲೋಪ, ದುರ್ನಡತೆಯಂತಹ ಗಂಭೀರವಾದ ಆರೋಪಗಳಿವೆ. ಇಂತಹ ಆರೋಪಗಳು ಸರ್ಕಾರಿ ನೌಕರರಿಗೆ ತಕ್ಕದಲ್ಲ. ಜತೆಗೆ ಆಸ್ಪತ್ರೆಯ ಸಿಬ್ಬಂದಿಗಳು ಸಾಕ್ಷಿ ಹೇಳಲು ಹಿಂದೇಟು ಹಾಕುತ್ತಾರೆಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವರದಿ ಸಲ್ಲಿಕೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಮೂಡುಗೆರೆ ಇಎನ್‌ಟಿ ತಜ್ಞರ ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Articles

Back to top button
error: Content is protected !!