ಆತ್ಮಹತ್ಯೆಗೆ ಡೆತ್ನೋಟಲ್ಲಿ ಹೆಸರು ಉಲ್ಲೇಖಿಸಿದರೆ ಕುಮ್ಮಕ್ಕು ನೀಡಿದ ಅಪರಾಧ ಸಾಬೀತಾಗದು :ಹೈಕೋರ್ಟ್

Views: 40
ಬೆಂಗಳೂರು ಆತ್ಮಹತ್ಯೆಗೆ ಶರಣಾದವರು ಬರೆದಿಟ್ಟ ಡೆತ್ನೋಟ್ನಲ್ಲಿ ಹೆಸರು ಉಲ್ಲೇಖಿಸಿರುವುದಕ್ಕೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಪರಾಧ ಸಾಬೀತಿಗೆ ಸಾಕಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಮನೆ ಕೆಲಸದಾಕೆ ಬರೆದಿಟ್ಟ ಡೆತ್ನೋಟ್ನಲ್ಲಿ ಮನೆ ಮಾಲೀಕರ ಹೆಸರು ಉಲ್ಲೇಖಿಸಿರುವ ಕಾರಣವು ವಿಚಾರಣೆಯಲ್ಲಿ ದೃಢಪಡಬೇಕಿದೆ ಎಂದು ಮನೆ ಮಾಲೀಕರ ವಿರುದ್ಧದ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಕೈ ಬಿಡಲು ನಿರಾಕರಿಸಿದ್ದ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ ಈ ಆದೇಶ ಮಾಡಿದೆ.
ಮೃತಳು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರಾದ ಶಿವಮೊಗ್ಗದ ವಿವೇಕಾನಂದ ಬಡಾವಣೆ ನಿವಾಸಿಗಳಾದ ಜಿ.ಎಚ್. ಓಂಕಾರಪ್ಪ ಮತ್ತವರ ಪತ್ನಿ ಅನುಸೂಯಮ್ಮ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರ ಮೇಲಿದ್ದ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಕೈಬಿಟ್ಟು ಆದೇಶಿಸಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 306 ಪ್ರಕಾರ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಆ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರು ಶಿಕ್ಷಾರ್ಹರಾಗುತ್ತಾರೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅಪರಾಧ ಚಿಂತನೆ (ತಪ್ಪು ಮಾಡಿದ ಭಾವನೆ) ಸ್ಪಷ್ಟವಾಗಿ ಇರಬೇಕು. ಮೃತರು ಆತ್ಮಹತ್ಯೆ ಮಾಡಿಕೊಳ್ಳಲು ನೇರ ಅಥವಾ ಸಕ್ರಿಯ ಕೃತ್ಯ ಇರಬೇಕು. ಆ ಕೃತ್ಯವು ಮೃತರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟರೆ ಅನ್ಯ ಆಯ್ಕೆ ಇಲ್ಲ ಎಂಬ ಪರಿಸ್ಥಿತಿ ಸೃಷ್ಟಿಸಿರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ
ಅರ್ಜಿದಾರರ ಮನೆಯಲ್ಲಿ ಶೃತಿ ಎಂಬ ಯುವತಿ ಎರಡು ವರ್ಷ ಕೆಲಸ ಮಾಡಿಕೊಂಡಿದ್ದರು. ಆಕೆ 2015ರಲ್ಲಿ ಅರ್ಜಿದಾರರ ಮನೆಯ ಕೊಠಡಿಯಲ್ಲಿ ಒಳಗಿನಿಂದ ಬೋಲ್ಟ್ ಹಾಕಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರು. ಪಕ್ಕದಲ್ಲೇ ಆಕೆ ಬರೆದಿಟ್ಟ ಚೀಟಿ (ಡೆತ್ನೋಟ್) ಕಂಡುಬಂದಿತ್ತು. ಮೃತಳ ತಾಯಿ ನೀಡಿದ್ದ ದೂರಿನ ತನಿಖೆ ನಡೆಸಿದ್ದ ತುಂಗಾನಗರ ಠಾಣಾ ಪೊಲೀಸರು, ಅರ್ಜಿದಾರರ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪ ಕೈ ಬಿಡಲು ಕೋರಿದ್ದ ಅರ್ಜಿದಾರರ ಮನವಿಯನ್ನು 2023ರ ಡಿ.18ರಂದು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ಗೆ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರು, ಡೆತ್ನೋಟ್ನಲ್ಲಿ ತಾನು ಯುವಕನ್ನು ಪ್ರೀತಿಸುತ್ತಿದ್ದ ಮಾಹಿತಿ, ಫೋನ್ ನಂಬರ್ ಮತ್ತು ಅರ್ಜಿದಾರರು ತನ್ನ ಸಾವಿಗೆ ಜವಾಬ್ದಾರರು ಎಂದು ಮೃತಳು ಉಲ್ಲೇಖಿಸಿದ್ದರು. ಅದು ಬಿಟ್ಟು ಅರ್ಜಿದಾರರು ಕಿರುಕುಳ, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಬಗ್ಗೆ ಉಲ್ಲೇಖವಿಲ್ಲ. ತಾಯಿಯ ದೂರಿನಲ್ಲಿ ಈ ಆರೋಪವಿಲ್ಲ. ಆರೋಪ ಸಾಬೀತುಪಡಿಪಡಿಸುವ ದಾಖಲೆ/ಸಾಕ್ಷ್ಯಾಧಾರವನ್ನು ಆರೋಪ ಪಟ್ಟಿಯಲ್ಲಿ ಒದಗಿಸಿಲ್ಲ ಎಂದು ವಾದಿಸಿದ್ದರು. ಅದನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಆರೋಪದ ಬಗ್ಗೆ ಅಧೀನ ನ್ಯಾಯಾಲಯದಲ್ಲೇ ದೃಢಪಡಬೇಕಿದೆ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.






