ಜನಮನ

ದಾರಿ ತಪ್ಪಿಸುವ ಜಾಹೀರಾತಿಗೆ ನಟಿಸುವ ಸೆಲೆಬ್ರಿಟಿಗಳೇ ಹೊಣೆ: ಸುಪ್ರೀಂ ಕೋರ್ಟ್‌

Views: 59

ನವದೆಹಲಿ :ಪತಂಜಲಿ ಆಯುರ್ವೇದ ಕಂಪನಿಯ ವಂಚಕ ಜಾಹೀರಾತುಗಳ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಮಂಗಳವಾರ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಈ ಸೂಚನೆ ನೀಡಿತು. ಅಲ್ಲದೆ ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಘವನ್ನೂ ತರಾಟೆ ತೆಗೆದುಕೊಂಡಿತು.

ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿತಪ್ಪಿಸುವ ಜಾಹೀರಾತುಗಳಿಗೆ ಅವುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳೂ ಸಮಾನವಾಗಿ ಹೊಣೆಗಾರರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಜಾಹೀರಾತುಗಳನ್ನು ಪ್ರಸಾರ ಮಾಡುವವರು ಇನ್ನುಮುಂದೆ ಸ್ವಯಂ ಘೋಷಣೆ ಸಲ್ಲಿಸಬೇಕು. ಅದರಲ್ಲಿ ತಾವು ಜಾಹೀರಾತುಗಳ ನಿಯಮಕ್ಕೆ ಬದ್ಧರಾಗಿದ್ದು, ಈಗ ಪ್ರಸಾರ ಮಾಡುತ್ತಿರುವ ಜಾಹೀರಾತು ಕೂಡ ನಿಯಮಕ್ಕೆ ಅನುಗುಣವಾಗಿದೆ ಎಂದು ಖಾತ್ರಿ ನೀಡಬೇಕು ಎಂದು ಸೂಚನೆ ನೀಡಿದೆ.

ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಯಲು ‘ಪ್ರಿವೆನ್ಷನ್‌ ಆಫ್‌ ಮಿಸ್‌ಲೀಡಿಂಗ್‌ ಅಡ್ವರ್ಟೈಸ್‌ಮೆಂಟ್‌ ಅಂಡ್‌ ಎಂಡೋರ್ಸ್‌ಮೆಂಟ್‌-2022’ ಎಂಬ ನಿಯಮವಿದೆ. ಅದರಲ್ಲಿರುವ 13ನೇ ನಿಯಮದ ಪ್ರಕಾರ ಜಾಹೀರಾತಿನಲ್ಲಿ ನಟಿಸುವವರಿಗೆ ಅಥವಾ ಕಾಣಿಸಿಕೊಳ್ಳುವವರಿಗೆ ತಾವು ಯಾವ ಉತ್ಪನ್ನ ಅಥವಾ ಸೇವೆಯನ್ನು ಜನರಿಗೆ ಬಳಸಲು ಹೇಳುತ್ತಿದ್ದೇವೆ ಎಂಬುದು ತಿಳಿದಿರಬೇಕಾಗುತ್ತದೆ. ವಿಶೇಷವಾಗಿ ಆರೋಗ್ಯ ಹಾಗೂ ಆಹಾರ ವಿಭಾಗದಲ್ಲಿ ಜನರಿಗೆ ತಾವು ಖರೀದಿಸುತ್ತಿರುವ ಉತ್ಪನ್ನದ ಬಗ್ಗೆ ಅಗತ್ಯ ಮಾಹಿತಿ ಇರಬೇಕಾಗುತ್ತದೆ. ಹೀಗಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಕೂಡ ದಾರಿತಪ್ಪಿಸುವ ಜಾಹೀರಾತುಗಳಿಗೆ ಸಮಾನ ಹೊಣೆಗಾರರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ

 

Related Articles

Back to top button
error: Content is protected !!