HSRP ಮೇ.31ರ ತನಕ ಗಡುವು ವಿಸ್ತರಣೆ, ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ ಏನು?

Views: 36
ಬೆಂಗಳೂರು, ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮೇ ಅಂತ್ಯದ ತನಕ ಗಡುವು ನೀಡಲಾಗಿದೆ. ಈ ಗಡುವು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದ್ದು, ಜೂನ್ ತಿಂಗಳಿನಿಂದ ದಂಡ ಹಾಕಲು ತೀರ್ಮಾನಿಸಲಾಗಿದೆ
ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. “ಈ ತನಕ ರಾಜ್ಯದಲ್ಲಿ 34 ಲಕ್ಷ ವಾಹನಗಳಿಗೆ ಹೆಚ್ಎಸ್ಆರ್ಪಿ ನೋಂದಣಿ ಮಾಡಲಾಗಿದೆ. ಎರಡು ಬಾರಿ ಗಡುವು ವಿಸ್ತರಣೆ ಮಾಡಿದರೂ ಸಹ ನಂಬರ್ ಪ್ಲೇಟ್ ಅಳವಡಿಕೆ ಕಡಿಮೆ ಪ್ರಮಾಣದಲ್ಲಿ ಆಗಿದೆ” ಎಂದರು
“ಫೆಬ್ರವರಿ ತಿಂಗಳ ವೇಳೆಗೆ ಸುಮಾರು 18 ಲಕ್ಷ ವಾಹನಗಳು ನೋಂದಣಿಯಾಗಿತ್ತು. ಏಪ್ರಿಲ್ ತಿಂಗಳ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳ ಪ್ಲೇಟ್ ಅಳವಡಿಕೆ ಬಾಕಿ ಇದೆ” ಎಂದು ಆಯುಕ್ತರು ಹೇಳಿದ್ದಾರೆ.
“ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡದಿದ್ದರೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ನಂತರವೂ ಆಳವಡಿಕೆ ಮಾಡದಿದ್ದರೆ 1000 ರೂ. ದಂಡ ಹಾಕಲಾಗುತ್ತದೆ” ಎಂದು ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.
“ಹೆಚ್ಎಸ್ಆರ್ಪಿ ಅಳವಡಿಕೆಗೆ ಮೇ ಅಂತ್ಯದ ತನಕ ಗಡುವು ನೀಡಲಾಗಿದೆ. ಲೋಕಸಭೆ ಮಾದರಿ ಚುನಾವಣಾ ನೀತಿ ಸಂಹಿತೆ ಮುಗಿಯುವ ತನಕ ಕಾಯಲಾಗುತ್ತದೆ. ಬಳಿಕ ಸರ್ಕಾರದ ಜೊತೆ ಚರ್ಚಿಸಿ, ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
“ಸದ್ಯ ನೀಡಿರುವ ಗಡುವಿನಂತೆ ಮೇ 31ರ ತನಕ ಕಾಯಲಾಗುತ್ತದೆ. ಹೆಚ್ಎಸ್ಆರ್ಪಿ ನೋಂದಣಿ 75 ಲಕ್ಷ ದಾಟುವ ನಿರೀಕ್ಷೆ ಇದೆ. ಅದರ ನಂತರವೂ ಗಡುವು ವಿಸ್ತರಣೆ ಮಾಡಬೇಕೆ?” ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
“ಜನರು ಈಗ ಹೆಚ್ಎಸ್ಆರ್ಪಿ ನೋಂದಣಿಗೆ ಮುಗಿ ಬೀಳುತ್ತಿದ್ದಾರೆ. ಇನ್ನಷ್ಟು ಸಮಯ ವಿಸ್ತರಣೆ ಮಾಡಿದರೆ ಎಲ್ಲಾ ವಾಹನಗಳ ನೋಂದಣಿ ಪೂರ್ಣವಾಗಲಿದೆ ಎಂಬ ಅಭಿಪ್ರಾಯವಿದೆ. ಆದರೆ ಗಡುವು ವಿಸ್ತರಣೆ ಮಾಡುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸದ್ಯಕ್ಕೆ ಗಡುವು ವಿಸ್ತರಣೆ ಮಾಡುವ ಪ್ರಸ್ತಾಪ ಇಲಾಖೆ ಮುಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ಇಲಾಖೆಯ ಮಾಹಿತಿಯಂತೆ ಸುಮಾರು 2 ಕೋಟಿ ವಾಹನಗಳು ಇನ್ನೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕಿದೆ. ಆದರೆ, ಮೇ 31ರ ಗಡುವು ಮತ್ತೆ ವಿಸ್ತರಣೆ ಮಾಡುವುದಿಲ್ಲ. ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಪ್ರಯೋಗ ಮಾಡಲು ಇಲಾಖೆ ಚಿಂತನೆ ನಡೆಸಿದೆ.
ಈಗಾಗಲೇ ಎರಡು ಬಾರಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಮೊದಲು 2023ರ ನವೆಂಬರ್ 17ರ ತನಕ ಅವಕಾಶ ನೀಡಲಾಗಿತ್ತು. ಬಳಿಕ 2024ರ ಫೆಬ್ರವರಿ 17ರ ತನಕ ಗಡುವು ನೀಡಲಾಗಿತ್ತು. ವಾಹನ ಸವಾರರ ಒತ್ತಾಯದ ಮೇರೆಗೆ ಮೇ 31ರ ತನಕ ಗಡುವು ನೀಡಲಾಗಿದೆ. ಆದ್ದರಿಂದ ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂಬುದು ಅಧಿಕಾರಿಗಳು ಹೇಳಿಕೆ
ಹೆಚ್ಎಸ್ಆರ್ಪಿ ಬಗ್ಗೆ ಜನರಿಗೆ ಸಹಾಯ ಮಾಡಲು ಸಾರಿಗೆ ಇಲಾಖೆ ಸಹಾಯವಾಣಿ ಆರಂಭಿಸಿದೆ. ಜನರು ಸಹಾಯವಾಣಿ ಸಂಖ್ಯೆ 9449863429/26 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಆನ್ಲೈನ್ನಲ್ಲಿ ಹೆಚ್ಎಸ್ಆರ್ಪಿ ಪ್ಲೇಟ್ ನೋಂದಣಿಗಾಗಿ ಹಲವಾರು ಲಿಂಕ್ ಸಿಗುತ್ತವೆ. ಆದರೆ ಅಧಿಕೃತ ಲಿಂಕ್ ಮೂಲಕ ಮಾತ್ರ ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಲಾಗಿದೆ.






