ಜನಮನ

ಮಗುವನ್ನು ರಕ್ಷಿಸಲು ಹೋಗಿ ದಾಂಡೇಲಿಯಲ್ಲಿ ಹುಬ್ಬಳ್ಳಿಯ ಒಂದೇ ಕುಟುಂಬದ 6 ಮಂದಿ ನೀರುಪಾಲು

Views: 192

ದಾಂಡೇಲಿ :ಪಿಕ್ನಿಕ್ ತೆರಳಿದ ನಗರದ ಸಮೀಪದಲ್ಲಿರುವ ಜೋಯಿಡಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಬಿರಿಯಂಪಾಲಿ ಗ್ರಾಮದ ಅಕೋಡಾದಲ್ಲಿ ಈಜಾಡಲು ನದಿಗಿಳಿದ ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ ಆರು ಜನ ಮೃತಪಟ್ಟ ಹೃದಯವಿದ್ರಾವಕ ಘಟನೆ  ಘಟನೆ ಭಾನುವಾರ ಸಂಜೆ ನಡೆದಿದೆ.

ಈಜಾಡಲೆಂದು ನದಿಗಳಿದಿದ್ದ ಆರು ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯ ಈಶ್ವರ ನಗರದ 40 ವರ್ಷ ವಯಸ್ಸಿನ ನಜೀರ್ ಅಹ್ಮದ್ ಚಮನ್ ಸಾಬ್ ಹೊನ್ನಂಬಲ್ ಹಾಗೂ ಅವರ ಮಕ್ಕಳಾದ 10 ವರ್ಷ ವಯಸ್ಸಿನ ಅಲ್ಪೀಯಾ ಮತ್ತು 06 ವರ್ಷ ವಯಸ್ಸಿನ ಮೊಹಿನ್, ನಜೀರ್ ಅವರ ಸಹೋದರಿ 38 ವರ್ಷ ವಯಸ್ಸಿನ ರೇಷ್ಮಾ ಉನ್ನಿಸಾ ತೌಫೀಕ್ ಅಹ್ಮದ್ ಮತ್ತು ಅವರ ಮಕ್ಕಳಾದ 15 ವರ್ಷ ವಯಸ್ಸಿನ ಇಫ್ರಾ ಮತ್ತು 12 ವರ್ಷ ವಯಸ್ಸಿನ ಅಬಿದ್ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಸಂಬಂಧಿಕರ ಭೇಟಿಗಾಗಿ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಕಾರವಾರಕ್ಕೆ ತೆರಳುತ್ತಿದ್ದರು.ದಾರಿ ಮಧ್ಯೆ ಕಾಳಿ ನದಿ ನೋಡಲು ಇಳಿದಿದ್ದರು.ಯಾರೂ ನದಿಗೆ ಇಳಿಯಬಾರದು ಎಂದು ಎಚ್ಚರಿಕೆ ಇದ್ದರೂ ನೀರಿಗೆ ಇಳಿದಿದ್ದರು.ಕಾಳಿ ನದಿ ದಡದಲ್ಲಿ ನಜೀರ್ ಅವರು ಪುತ್ರಿ ಮೊಹಿನ್ ಆಟವಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿದಾಗ ಮಗುವಿನ ರಕ್ಷಣೆಗೆ ನೀರಿಗಿಳಿದಾಗ ಈ ದುರ್ಘಟನೆ ಸಂಭವಿಸಿದೆ.

ನಗರದ ಜಂಗಲ್ ಲಾಡ್ಜಸ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಆರು ಜನರ ಶವಗಳನ್ನು ಮೇಲಕ್ಕೆ ಎತ್ತಲಾಗಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

Related Articles

Back to top button
error: Content is protected !!