‘ಜೆರೊಸಾ’ ಬೆನ್ನಲ್ಲೇ ಕರಾವಳಿಯಲ್ಲಿ ಈಗ ಟಿಪ್ಪು ಕಟೌಟ್ ವಿವಾದ !

Views: 60
ಜೆರೊಸಾ ವಿವಾದ ಬೆನ್ನಲ್ಲೇ ಕರಾವಳಿಯಲ್ಲಿ ಇದೀಗ ಟಿಪ್ಪು ಕಟೌಟ್ ವಿವಾದಕ್ಕೆ ಕಾರಣವಾಗಿದೆ. ಅನುಮತಿ ಪಡೆಯದ ಕಟೌಟ್ ತೆರವಿಗೆ ನೋಟಿಸ್ ನೀಡಿದ್ರೆ, ಕಟೌಟ್ ತೆರವಿಗೆ ಡಿವೈಎಫ್ಐ ಕಾರ್ಯಕರ್ತರು ನಿರಾಕರಿಸಿದ್ದು, ಇದಕ್ಕೆ ಹಿಂದೂ ಪರ ಸಂಘಟನೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ.
ಈಗಾಗಲೇ ನಗರದಲ್ಲಿ ಸೃಷ್ಠಿಯಾಗಿರೋ ಜೆರೊಸಾ ವಿವಾದವೇ ಮರೆಯಾಗಿಲ್ಲ. ಇದರ ಪಟ್ಟಿಗೆ ಇದೀಗ ಮತ್ತೊಂದು ಮತೀಯ ವಿವಾದ ಸೇರಿಕೊಂಡಿದೆ. ಇಷ್ಟು ದಿನ ತಣ್ಣಗಾಗಿದ್ದ ಟಿಪ್ಪು ಕಟೌಟ್ ವಿವಾದ ಮತ್ತೆ ಹುಟ್ಟಿಕೊಂಡಿದೆ.
ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಫೆಬ್ರವರಿ 25 ರಿಂದ 27ರವರೆಗೆ ಈ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಪ್ರಯುಕ್ತ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯಕರ್ತರು ಹರೇಕಳದಲ್ಲಿರೋ ಕಚೇರಿ ಬಳಿ 6 ಅಡಿ ಎತ್ತರದ ಟಿಪ್ಪು ಕಟೌಟ್ ಅಳವಡಿಸಿದ್ದಾರೆ. ಇದೀಗ ಈ ಕಟೌಟ್ ವಿವಾದವನ್ನ ಎಬ್ಬಿಸಿದೆ. ಆದ್ರೆ, ಕಟೌಟ್ ಹಾಕಲು ಡಿವೈಎಫ್ಐ ಕಾರ್ಯಕರ್ತರು ಪೊಲೀಸರ ಅನುಮತಿನೇ ಪಡೆದಿಲ್ವಂತೆ. ಟಿಪ್ಪು ಕಟೌಟ್ ಹಾಕಿದ ಬೆನ್ನಲ್ಲೇ ಕೊಣಾಜೆ ಠಾಣಾಧಿಕಾರಿ ಕಾರ್ಯಕರ್ತರಿಗೆ ಕಟೌಟ್ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ನೋಟಿಸ್ ಅನ್ನು ಖಂಡಿಸಿ ಡಿವೈಎಫ್ಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ತಾವು ಟಿಪ್ಪು ಪ್ರತಿಮೆ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧವಿದೆಯೇ ಎಂದು ಡಿವೈಎಫ್ಐ ಪ್ರಶ್ನೆ ಮಾಡಿದೆ. ಅಲ್ಲದೇ ನಿಷೇಧ ಹೇರಿದ ಸರ್ಕಾರ ಯಾವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಸರಕಾರ ಇದೆಯಾ? ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಪೊಲೀಸರಿಂದ ಸಂಘಿ ಮನಸ್ಥಿತಿಯಿಂದ ಕೆಲಸ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲಾ ಮಹಾತ್ಮರ ಬ್ಯಾನರ್ಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಲ್ಲುತ್ತಾರೆ ಎಂದು ಡಿವೈಎಫ್ಐ ಮುಖಂಡ ಇಮ್ತಿಯಾಜ್ ಪ್ರಕಟಣೆ ಹೊರಡಿಸಿದ್ದಾರೆ. ಆದ್ರೆ ಡಿವೈಎಫ್ಐ ಕಾರ್ಯಕರ್ತರ ನಡೆಗೆ ಹಿಂದೂ ಪರ ಸಂಘಟನೆಗಳು ಕೌಂಟರ್ ನೀಡಿವೆ. ಅನಧಿಕೃತವಾಗಿ ಹಾಕಿರುವ ಟಿಪ್ಪು ಕಟೌಟ್ ತೆಗೆಯದಿದ್ದರೆ ತಾವು ಪ್ರತಿಭಟನೆಗೆ ಇಳಿಯುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.