ಧಾರ್ಮಿಕ

ಇತಿಹಾಸ ಪ್ರಸಿದ್ಧ ಬಸ್ರೂರು

Views: 44

ಕುಂದಾಪುರದಿಂದ ಪೂರ್ವಕ್ಕೆ ಸುಮಾರು 6 ಕಿ.ಮೀ. ದೂರದಲ್ಲಿ ಬಸ್ರೂರು ಪಟ್ಟಣವಿದೆ. ಹಿಂದೆ ವಸುರಾಜ ಆಳುತ್ತಿದ್ದ ವಸುಪುರವೇ ಮುಂದೆ ರೂಪಾಂತರಗೊಂಡು ಬಸರೂರು, ಬಸ್ರೂರು ಆಯಿತೆಂದು ಹೇಳುತ್ತಾರೆ.
ಬಸ್ರೂರು ವಾರಾಹಿ ನದಿ ತೀರದಲ್ಲಿದ್ದು, ಊರಿನ ಉತ್ತರ ತುದಿಯಲ್ಲಿರುವ ಮಂಡಿಬಾಗಿಲು ಪ್ರಸಿದ್ಧ ಬಂದರು ಪ್ರದೇಶವಾಗಿತ್ತು ಎನ್ನಲಾಗುತ್ತದೆ. ಬಸ್ರೂರು ಪ್ರಸಿದ್ಧ ವ್ಯಾಪಾರೀ ಕೇಂದ್ರವಾಗಿ ಗುರುತಿಸಲ್ಪಟ್ಟಿತ್ತು. ಬಸ್ರೂರು ಬಂದರು ಮುಖ್ಯವಾಗಿ ಕೆಳದಿ ಸಂಸ್ಥಾನದ ಆವಶ್ಯಕತೆಗಳನ್ನು ಪೂರೈಸುವ ಉದ್ದೇಶ ಹೊಂದಿತ್ತು ಎಂದೂ ಕೇಳಿಬರುತ್ತದೆ.
12ನೆಯ ಶತಮಾನದಿಂದಲೇ ಬಸ್ರೂರನ್ನು ವಿಜಯನಗರ, ಕೆಳದಿ, ಆಳುಪ ರಾಜರು ಆಳುತ್ತಿದ್ದರೆಂದು ಹೇಳಲಾಗುತ್ತದೆ. 12ನೆಯ ಶತಮಾನದಲ್ಲಿ ಬಸ್ರೂರು ಆಳುಪರ ಆಳ್ವಿಕೆಗೆ ಒಳಪಟ್ಟಿತ್ತು. ಬಸ್ರೂರು ಮತ್ತು ಬಾರ್ಕೂರು ಅವರ ರಾಜಧಾನಿಗಳಾಗಿದ್ದವು ಎನ್ನಲಾಗುತ್ತದೆ.
16ನೆಯ ಶತಮಾನದಲ್ಲಿ ಪೋರ್ಚುಗೀಸರು ಬಸ್ರೂರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಮುಂದೆ ಛತ್ರಪತಿ ಶಿವಾಜಿ ಮಹಾರಾಜರು ಅವರನ್ನು ಸೋಲಿಸಿ, ಹಿಮ್ಮೆಟ್ಟಿಸಿ, ಬಸ್ರೂರನ್ನು ಸ್ವತಂತ್ರಗೊಳಿಸಿದರು ಎನ್ನುವುದೂ ತಿಳಿದು ಬರುತ್ತದೆ.
ವ್ಯಾಪಾರಿಗಳು, ಶಿಲ್ಪಿಗಳು, ನೇಕಾರರು, ಗುಡಿಗಾರರು, ಕುಶಲಕರ್ಮಿಗಳು ಮೊದಲಾದವರು ಬಸ್ರೂರಿನ ಪ್ರಮುಖ ನಾಗರಿಕರಾಗಿದ್ದರು. ಸಂಗೀತ, ನೃತ್ಯ, ನಾಟಕ ಮೊದಲಾದ ಕಲಾಪ್ರಕಾರಗಳಿಗೂ ಬಸ್ರೂರು ಹೆಸರುವಾಸಿಯಾಗಿತ್ತು. ಜನರ ಮಧ್ಯೆ ಘರ್ಷಣೆ, ಜಗಳ ಉಂಟಾದಾಗ ಊರಿನ ಹಿರಿಯರೇ ಸೇರಿ ಪಂಚಾಯತಿಕೆಯಿಂದಲೇ ಶಾಂತಿಯುತ ನ್ಯಾಯ ತೀರ್ಮಾನ ಮಾಡಿಕೊಳ್ಳುವುದು ಮತ್ತು ಸೂಕ್ತ ಪರಿಹಾರ ಕಂಡುಕೊಳ್ಳುವುದು ಬಸ್ರೂರಿನ ವೈಶಿಷ್ಟ್ಯವಾಗಿತ್ತು.
ಬಸ್ರೂರಿನ ಬೀದಿಬೀದಿಗಳಲ್ಲೂ ದೇವಸ್ಥಾನಗಳು ಕಂಡುಬರುತ್ತವೆ. 20ಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿವೆ. ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ತಿರುಮಲ ವೆಂಕಟರಮಣ ದೇವಸ್ಥಾನ, ಶ್ರೀದೇವಿ ದೇವಸ್ಥಾನ, ಆಂಜನೇಯ ದೇವಸ್ಥಾನ, ಮಹಾಲಸಾ ನಾರಾಯಣೀ ದೇವಸ್ಥಾನ, ಕಾಮಾಕ್ಷಿ ದೇವಸ್ಥಾನ – ಹೀಗೆ ಇನ್ನೂ ಅನೇಕ ದೇವಸ್ಥಾನಗಳನ್ನು ಇಲ್ಲಿ ನೋಡಬಹುದು. ಕಾಶೀಮಠ, ಗೋಕರ್ಣ ಪರ್ತಗಾಳಿ ಮಠಗಳು ಇಲ್ಲಿವೆ. ಮಸೀದಿ, ಚರ್ಚ್ ಗಳೂ ಇವೆ. ಹಳೆಯ ಶಿಲಾಶಾಸನಗಳು ಬಹಳಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತವೆ.
ಬಸ್ರೂರು ಶಿಕ್ಷಣ, ಕಲೆ, ಸಂಸ್ಕೃತಿಗಳಿಗೆ ಹೆಸರಾದ ಪಟ್ಟಣ. ಸುತ್ತಲಿನ ಉಳ್ಳೂರು, ಬಳ್ಕೂರು, ಕಂದಾವರ, ಜಪ್ತಿ, ಮೇರ್ಡಿ, ಕಳಂಜಿ, ಆನಗಳ್ಳಿ, ಮಾರ್ಗೋಳಿ, ಕೋಳ್ಕೆರೆ, ಹಟ್ಟಿಕುದ್ರು ಮೊದಲಾದ ಹಲವು ಹಳ್ಳಿಗಳು ವ್ಯಾಪಾರ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಮೊದಲಾದ ಜೀವನಾವಶ್ಯಕತೆಗಳ ಪೂರೈಕೆಗೆ ಬಸ್ರೂರನ್ನೇ ಆಶ್ರಯಿಸಿಕೊಂಡಿವೆ.
ಕುಂದಾಪುರದಿಂದ ಬಸ್ರೂರು ಮಾರ್ಗವಾಗಿ ಸಿದ್ದಾಪುರ, ಬಾಳೆಬರೆ ಘಾಟಿಗಳ ಮೂಲಕ ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗಗಳ ಕಡೆಗೂ, ಹಾಲಾಡಿ, ಸೋಮೇಶ್ವರ, ಆಗುಂಬೆ ಮೂಲಕ ಶೃಂಗೇರಿ, ತೀರ್ಥಹಳ್ಳಿಗಳ ಕಡೆಗೂ, ಹೆಬ್ರಿ, ಕಾರ್ಕಳಗಳ ಕಡೆಗೂ ಸಂಪರ್ಕ ರಸ್ತೆಗಳ ಅನುಕೂಲತೆ ಇದೆ. ಸಂಚಾರ ಸೌಲಭ್ಯಕ್ಕೆ ಬಸ್ ಮತ್ತು ಆಟೋರಿಕ್ಷಾಗಳ ಸೇವೆ ಲಭ್ಯವಿದೆ. ಕುಂದಾಪುರ ರೈಲ್ವೆ ನಿಲ್ದಾಣ ಸುಮಾರು ಎರಡು ಕಿಲೋಮೀಟರ್ ಗಳಿಗೂ ಕಡಿಮೆ ದೂರದಲ್ಲಿದೆ.
ಇತಿಹಾಸ ಪ್ರಸಿದ್ಧ ಬಸ್ರೂರಿನಲ್ಲಿ ಏಳು ಕೇರಿಗಳು ಮತ್ತು ಏಳು ಕೆರೆಗಳನ್ನು ನೋಡಬಹುದು.

ಏಳು ಕೇರಿಗಳು:
1. ಮಂಡಿಕೇರಿ (ಮಹಾಲಿಂಗೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿದೆ. ಸಗಟು ಮಾರಾಟದ ಮಳಿಗೆಗಳಿಗೆ ಮಂಡಿ ಎನ್ನುತ್ತಾರೆ. ಆದ್ದರಿಂದ ಅದು ಮಂಡಿಕೇರಿ ಎನಿಸಿಕೊಂಡಿರಬೇಕು. ಈ ಕೇರಿಯ ಕೊನೆಯಲ್ಲಿ ಮಂಡಿಬಾಗಿಲು ಅಂದರೆ ಬಂದರು ಪ್ರದೇಶ ಇದೆ. ಹಟ್ಟಿಕುದ್ರಿಗೆ ಇಲ್ಲಿಂದಲೇ ದೋಣಿ ಸಂಪರ್ಕ. ಈಗ ಹಟ್ಟಿಕುದ್ರಿಗೆ ಸೇತುವೆ ನಿರ್ಮಾಣವಾಗಿದೆ.)
2. ವಿಲಾಸಕೇರಿ (ಮಂಡಿಕೇರಿಯ ಪೂರ್ವಭಾಗದಲ್ಲಿದೆ.)
3. ಬಸದಿಕೇರಿ (ಬಸ್ತಿಕೇರಿ. ಬಸ್ತಿಬಾಗಿಲು ಎನಿಸಿಕೊಂಡ ಸ್ಥಳ ಈ ಕೇರಿಯಲ್ಲೇ ಇದೆ.)
4. ರಾವುತಕೇರಿ (ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಬೀದಿಯ ದಕ್ಷಿಣ ಭಾಗದಲ್ಲಿ ಈ ಕೇರಿ ಇದೆ. ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನ, ಶ್ರೀದೇವಿ ದೇವಸ್ಥಾನ ಮತ್ತು ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಗಳು ಈ ಕೇರಿಯಲ್ಲಿವೆ.)
5. ಗುಡಿಗಾರ ಕೇರಿ (ವೆಂಕಟರಮಣ ದೇವಸ್ಥಾನದ ಬಲಗಡೆ ಪೂರ್ವದಲ್ಲಿ ಈ ಕೇರಿ ಇದೆ.)
6. ಮೇಲ್ ಕೇರಿ (ಊರಿನ ದಕ್ಷಿಣ ಭಾಗದಲ್ಲಿ ನೀರಿನ ಟ್ಯಾಂಕ್ ನಿಂದ ಹಿಡಿದು ಶಾರದಾ ಕಾಲೇಜಿನ ವರೆಗೂ ಈ ಕೇರಿ ಇದೆ. ನೇಕಾರರ ಕೇರಿಯೂ ಇದಾಗಿತ್ತು.)
7. ಮೂಡುಕೇರಿ (ಇದು ಊರಿನ ಪೂರ್ವಭಾಗದಲ್ಲಿದೆ. ದಕ್ಷಿಣದ ಕಾಶಿಮಠದಿಂದ ಹಿಡಿದು ಉತ್ತರದ ಕೋಟಿಚೆನ್ನಯ್ಯರ ಗರಡಿ ಮನೆಯ ವರೆಗೂ ಈ ಕೇರಿ ಇದೆ.)

ಏಳು ಕೆರೆಗಳು:
1. ದೇವರ ಕೆರೆ (ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪಶ್ಚಿಮ ಭಾಗದಲ್ಲಿದೆ. ಶ್ರೀ ಮಹಾಲಿಂಗೇಶ್ವರ ದೇವರ ದೀಪೋತ್ಸವ, ತೆಪ್ಪೋತ್ಸವಗಳು ಇಲ್ಲಿಯೇ ನಡೆಯುತ್ತವೆ.)
2. ಹಲರ ಕೆರೆ (ಬಂಟರ ಅಥವಾ ನಾಡವರಲ್ಲಿ ಹಲರ ಮನೆತನವೊಂದಿತ್ತು ಎನ್ನುತ್ತಾರೆ. ಶ್ರೀ ಮಹಾಲಿಂಗೇಶ್ವರ ದೇವರ ಓಕುಳಿ ಹೊಂಡ ತುಂಬಿಸಲು ಈ ಕೆರೆಯ ನೀರು ಉಪಯೋಗಿಸುತ್ತಾರಂತೆ.)
3. ಮೂಡುಕೇರಿ ಕೆರೆ (ಮೂಡುಕೇರಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದ ಎದುರಿನಲ್ಲಿದೆ.)
4. ಪಳ್ಳಿ ಕೆರೆ (ಮುಸ್ಲಿಮರ ಪ್ರಾರ್ಥನಾ ಮಂದಿರದ ಹತ್ತಿರದಲ್ಲಿದೆ.)
5. ಮಠದ ಕೆರೆ (ಮೂಡುಕೇರಿಯ ಶ್ರೀ ರಾಮಚಂದ್ರ ದೇವಸ್ಥಾನದ ಹಿಂಭಾಗದಲ್ಲಿದೆ.)
6. ಗದ್ದೆಮನೆ ಕೆರೆ (ಈ ಕೆರೆಯ ಮುಂದೆ ಕೋಟಿಚೆನ್ನಯ್ಯ ಗರಡಿ ಇದೆ.)
7. ಚಿಲುಮೆ ಕೆರೆ (ಬಹಳ ಹಿಂದೆ ಇಲ್ಲಿ ವೀರಶೈವರ ಮಠ ಮತ್ತು ಗುಡಿ ಇತ್ತಂತೆ.)

ಬಸ್ರೂರು ಒಂದು ಹೆಸರಾಂತ ಧಾರ್ಮಿಕ ಕೇಂದ್ರವೂ ಆಗಿತ್ತು ಎನ್ನಲಾಗುತ್ತದೆ. ಬಸ್ರೂರಿನ ದಕ್ಷಿಣ ತುದಿಯಲ್ಲಿ ಗುಪ್ಪಿ ಹಾಡಿ ಇದೆ. ಇಲ್ಲಿ ಸದಾನಂದ ಯತಿಗಳ ಮಠ ಇದ್ದಿತೆಂದು ಹೇಳಲಾಗುತ್ತದೆ. ಇದನ್ನು ಪುಷ್ಟೀಕರಿಸಲು ಇಲ್ಲಿ ಕಲ್ಲಿನ ನಿರ್ಮಾಣಗಳ ಅವಶೇಷಗಳು ಈಗಲೂ ಕಾಣಸಿಗುತ್ತವೆ.

– ನಾರಾಯಣ ಶೆಟ್ಟಿಗಾರ್, ಬೆಂಗಳೂರು
ಮೊ. 9845660131

Related Articles

Back to top button
error: Content is protected !!