ಜನಮನ

ಹೃದಯವಿದ್ರಾಹಕ ಘಟನೆ :ಆಟವಾಡುತ್ತಿದ್ದ ಮಗು ಕಾರು ಹರಿದು ಮೃತ್ಯು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

Views: 8

ಬೀದರ್‌ನಲ್ಲಿ ಹೃದಯವಿದ್ರಾಹಕ ಘಟನೆಯೊಂದು ನಡೆದಿದ್ದು, ಆಟವಾಡುತ್ತಿದ್ದಾಗ ಕಾರು ಹರಿದು ಎರಡು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಚಾಲಕನ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ವಕೀಲ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿಯ ಎರಡನೇ ಮಗ ಬಸವಚೇತನ ಮೃತ ಬಾಲಕ. ಬಾಲಕ ಮನೆ ಮುಂದೆ ಓಡಾಡುವಾಗ ಈ ಘಟನೆ ಸಂಭವಿಸಿದೆ.

ಘಟನೆಯ ವಿವರ: ಸತೀಶ ಪಾಟೀಲ ಅವರು ಹಾರೂರಗೇರಿಯಲ್ಲಿನ ಸಹೋದರಿಯ ಮನೆಗೆ ಬಂದಿದ್ದರು. ಸತೀಶ ಸಹೋದರಿ, ಸಂಬಂಧಿಕರ ಜೊತೆ ಮಾತನಾಡುತ್ತಿದ್ದು ಬಳಿಕ ಅವರನ್ನು ಬೀಳ್ಕೊಟ್ಟು ಮನೆಯೊಳಗೆ ಬಂದಿದ್ದರು. ಆದರೆ ಅವರನ್ನು ಹುಡುಕಿಕೊಂಡು ಚಾಕೊಲೇಟ್‌ ತಿನ್ನುತ್ತ ಬಸವಚೇತನ ಮನೆ ಹೊರಗೆ ಹೋಗಿದ್ದ. ಒಂದು ಬದಿ ನಿಂತಿದ್ದ ಬಾಲಕ ಮತ್ತೊಂದು ಕಡೆಗೆ ನಿಧಾನವಾಗಿ ಹೋಗುತ್ತಿದ್ದ. ಈ ವೇಳೆ ದಂತ ವೈದ್ಯ ಡಾ. ಸುನೀಲ ಭಂಡಾರಿ ಅವರ ಇನ್ನೋವಾ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಬಾಲಕ ಬರುವುದನ್ನು ಸುನೀಲ ಭಂಡಾರಿ ಗಮನಿಸಿಲ್ಲ. ಕಾರು ಬಾಲಕನ ಮೇಲೆ ಹರಿದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ದಾಖಲಾಗಿದ್ದು, ಮಗು ವಾಹನದಡಿಗೆ ಬಿದ್ದ ನಂತರ ಚಾಲಕ ಸ್ಥಳದಿಂದ ಹೇಗೆ ಪರಾರಿಯಾಗಿದ್ದಾನೆ ಎಂಬುದನ್ನು ತೋರಿಸಿದೆ. ಘಟನೆಯ ವೇಳೆ ಸ್ಥಳದಲ್ಲಿದ್ದ ಜನ ಬಾಲಕನ ಬಳಿ ಧಾವಿಸಿ ರಕ್ಷಣೆಗೆ ಪ್ರಯತ್ನಿಸಿದ್ದರು.

ಘಟನೆಗೆ ಕಾರು ಚಾಲಕ ಸುನೀಲ್‌ ಭಂಡಾರಿಯ ನಿರ್ಲಕ್ಷ್ಯದ ಚಾಲನೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!