ಆರೋಗ್ಯ

ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಳ, ಹೈ ಅಲರ್ಟ್​ ಆದ ಸರ್ಕಾರ, ಹೊಸ ರೂಲ್ಸ್ ಜಾರಿಯಾಗುತ್ತಾ? 

Views: 2

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಭೀತಿ ಹೆಚ್ಚಾಗ್ತಿದೆ. ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗ್ತಿದೆ. ನಿಧಾನಕ್ಕೆ ಸಾವಿನ ಸಂಖ್ಯೆಯೂ ಏರಿಕೆಯಾಗ್ತಿದೆ. ಮತ್ತೊಂದೆಡೆ ಹೈ ಅಲರ್ಟ್​ ಆಗಿರುವ ಸರ್ಕಾರ ಮ್ಯಾರಥನ್​ ಮೀಟಿಂಗ್​ಗಳನ್ನು ಮಾಡ್ತಿದ್ದು, ಕೊರೊನಾನ ಟ್ಯಾಕಲ್ ಮಾಡೋಕೆ ರೆಡಿ ಆಗ್ತಿವೆ. ಕೊರೊನಾ ವೈರಸ್ ಮತ್ತೆ ಜೀವ ಪಡೆದುಕೊಂಡಿದೆ. JN 1 ಎನ್ನುವ ರೂಪಾಂತರ ಪಡೆದಿರುವ ವೈರಸ್​ ದೇಶದಲ್ಲಿ ಮತ್ತೆ ಭೀತಿ ಹೆಚ್ಚಿಸಿದೆ. ಈಗಾಗಲೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಸಾವಿನ ಸಂಖ್ಯೆಯೂ ನಿಧಾನಕ್ಕೆ ಏರಿಕೆ ಕಾಣ್ತಿದೆ. ಈ ಕಡೆ ಕರ್ನಾಟಕದಲ್ಲೂ ಕೊರೊನಾ ಕೇಸ್​ಗಳು ಪತ್ತೆಯಾಗ್ತಿದ್ದು, ಸರ್ಕಾರ ಹೈ ಅಲರ್ಟ್ ಆಗಿದೆ. ಕಳೆದ ಸಲ ಉಂಟಾದ ಸಾವು ನೋವುಗಳು ಆಗಬಾರದು ಅನ್ನೋ ನಿಟ್ಟಿನಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳೋಕೆ ಮುಂದಾಗಿದೆ.

ರಾಜ್ಯದಲ್ಲಿ JN.1 ಹೊಸ ವೈರಸ್​ ಮೂವರನ್ನು ಬಲಿ ಪಡೆದಿದೆ. ಬೆಂಗಳೂರು ಒಂದರಲ್ಲೇ ಕೊರೊನಾದಿಂದ ವೈರಸ್ ಮೂರು ಜೀವ ಹೋಗಿರೋದು ಸ್ವಲ್ಪ ಮಟ್ಟಿಗೆ ಆತಂಕ ಹೆಚ್ಚಿಸಿದೆ. ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 64 ವರ್ಷದ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ ಬೆನ್ನಲ್ಲೇ ಗುರುವಾರ ಮತ್ತಿಬ್ಬರು ಕೋವಿಡ್​ಗೆ ಪ್ರಾಣ ಕಳೆದುಕೊಂಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ 44 ವರ್ಷದ ಮೃತಪಟ್ಟರೆ, ಜೆಪಿ ನಗರದ ಖಾಸಗಿ ಆಸ್ಪತ್ರೆಯಲ್ಲಿ 76 ವರ್ಷದ ವೃದ್ಧ ಕೋವಿಡ್​ಗೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಮೂಲಕ ರಾಜ್ಯದಲ್ಲಿ ಅದರಲ್ಲೂ ಸಿಲಿಕಾನ್ ಸಿಟಿಯಲ್ಲೇ ಸಾವಿನ ಸಂಖ್ಯೆ 3ಕ್ಕೆ ಏರಿದೆ.

ಗುರುವಾರ ಹೊಸದಾಗಿ 22 ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟು 808 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 22 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 2.47% ಪಾಸಿಟಿವ್ ರೇಟ್ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ಕೋವಿಡ್ ನಿಂದ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇನ್ನು ಸೋಂಕಿತರ ಪೈಕಿ 72 ಜನ ಹೋಮ್ ಐಸೊಲೇಷನ್ ನಲ್ಲಿದ್ರೆ, 7 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಆರೋಗ್ಯ ಸಚಿವರನ್ನು ಒಳಗೊಂಡಂತೆ ಜೆಎನ್​.1 ತಳಿಯನ್ನು ನಿಯಂತ್ರಿಸಲು ಕ್ರಮ

ಕೇರಳದಲ್ಲಿ ಸೋಂಕಿತರ ಸಂಖ್ಯೆ 2400ಕ್ಕೂ ಅಧಿಕವಾಗಿದೆ. ಈ ಕಡೆ ಮಹಾರಾಷ್ಟ್ರ, ತೆಲಂಗಾಣ, ಹೈದರಾಬಾದ್​ ಹಾಗೂ ತಮಿಳುನಾಡಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ, ಕೂಡಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಕ್ಯಾಬಿನೆಟ್​ ಹಾಗೂ ತಾಂತ್ರಿಕ ಸಲಹ ಸಮಿತಿ ಜೊತೆ ಸುದೀರ್ಘ ಚರ್ಚೆ ನಡೆಸಿದೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವರನ್ನು ಒಳಗೊಂಡಂತೆ ಜೆಎನ್​.1 ತಳಿಯನ್ನು ನಿಯಂತ್ರಿಸಲು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅಂತ ಗಂಭೀರವಾಗಿ ಚರ್ಚೆ ಮಾಡಲಾಗಿದೆ. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರ್ವಜನಿಕರು ಹೇಗೆ ನಡೆದುಕೊಳ್ಳಬೇಕು ಹಾಗೂ ಆಸ್ಪತ್ರೆಗಳು ಹೇಗೆ ಇದನ್ನು ನಿಭಾಯಿಸಬೇಕು ಅಂತ ಸೂಚಿಸಿದರು.

ಕಳೆದ 24 ಘಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 24 ಕೊರೊನಾ ಕೇಸ್ ಪತ್ತೆಯಾಗಿವೆ. ಬೆಂಗಳೂರಿನಲ್ಲಿ 23 ಜನರಲ್ಲಿ ಕೊರೊನಾ ಹೊಸ ತಳಿ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 24 ಗಂಟೆಯಲ್ಲಿ 2 ಸಾವಿರದ 263 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. 11 ಜನ ಕೊರೊನಾದಿಂದ ಗುಣಮುಖ, ಸಾವು ವರದಿಯಾಗಿಲ್ಲ. ಸೋಂಕಿತರ ಪೈಕಿ 9 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೋಮ್ ಐಸೊಲೇಷನ್​​ನಲ್ಲಿರುವ 85 ಸೋಂಕಿತರು, 20 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು, ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವ ಜನರಿಗೆ ಸದ್ಯಕ್ಕೆ ರಿಲೀಫ್ ಎನ್ನಬಹುದು. ಇದುವರೆಗಿನ ಬೆಳವಣಿಗೆಯಲ್ಲಿ ಹೊಸ ವರ್ಷಾಚರಣೆ, ಕ್ರಿಸ್ ಮಸ್​ಗೆ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಇಲ್ಲ ಎಂದು ತಿಳಿಸಿರುವ ಸಿಎಂ ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸಬೇಕು ಎಂದಿದ್ದಾರೆ. ಇನ್ನು, ಕೋವಿಡ್​ ಕೇಸ್​ ಹೆಚ್ಚಳ ಹಿನ್ನೆಲೆ ಬೆಂಗಳೂರಿನ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚಿಸಿದೆ. ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸಲಹೆ ನೀಡಿದೆ. ರಾಮನಗರ, ಬಳ್ಳಾರಿಯಲ್ಲೂ ಕೊವಿಡ್​ ಕೇಸ್​ ಪತ್ತೆಯಾಗಿದ್ದು, ಜಿಲ್ಲಾಡಳಿತದಿಂದ ಕೆಲವು ಕಟ್ಟೆಚ್ಚರ ಕ್ರಮ ಜರುಗಿಸಲಾಗ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಬಗ್ಗೆ ಪರೀಶಿಲನೆ ಮಾಡಿ ಅಗತ್ಯ ಕ್ರಮಗಳನ್ನ ಜರುಗಿಸಲಾಗ್ತಿದೆ. ಕೋವಿಡ್​ ರೂಪಾಂತರ ತಳಿಯ ಪ್ರಭಾವ ನಿಧಾನಕ್ಕೆ ಜಾಸ್ತಿ ಆಗ್ತಿದೆ. ಈ ಕಡೆ ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದರೂ ಇತರೆ ರೋಗಗಳಿಂದ ಬಳಲುತ್ತಿರುವವರ ಮೇಲೆ ಈ ಸೋಂಕು ಸಹಜವಾಗಿ ಪರಿಣಾಮ ಬೀರುತ್ತಿದೆ. ಹಾಗಾಗಿ, ಸರ್ಕಾರ ಸೂಚಿಸುವ ಕ್ರಮಗಳ ಜೊತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.

Related Articles

Back to top button