ಬಡವರ ಪಾಲಿನ ವೈದ್ಯ ಹೇಮಚಂದ್ರ ಪ್ರಸಾದ್ ಹೃದಯಾಘಾತದಿಂದ ನಿಧನ

Views: 0
ಚಿಕ್ಕಮಗಳೂರು: 10 ರಿಂದ 20 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಜನ ಮೆಚ್ಚಿದ ಡಾಕ್ಟರ್ ಹೇಮಚಂದ್ರ ಪ್ರಸಾದ್ (71) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯ ಕಳಸದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಡಾಕ್ಟರ್ ಹೇಮಚಂದ್ರ ಪ್ರಸಾದ್ ನಿಧನವಾಗಿದ್ದಾರೆ. ನಿನ್ನೆ ರಾತ್ರಿ ವೈದ್ಯರಿಗೆ ಹೃದಯಾಘಾತ ಕಾಣಿಸಿಕೊಂಡ ವೇಳೆ ತಕ್ಷಣ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಸ್ವರೂಪದ ಹಾರ್ಟ್ ಅಟ್ಯಾಕ್ ಆಗಿದ್ದರಿಂದ ಇಂದು ಸಾವನ್ನಪ್ಪಿದ್ದಾರೆ.
ಬಡ ರೋಗಿಗಳ ಪಾಲಿಗೆ ದೇವರು ಆಗಿದ್ದ ವೈದ್ಯರ ನಿಧನದ ಹಿನ್ನೆಲೆಯಲ್ಲಿ ಸಾವಿರಾರು ಜನರು ಕಣ್ಣೀರು ಹಾಕಿದ್ದಾರೆ. ಇವರು ವೈದ್ಯರಾಗಿ ಸೇವೆ ಸಲ್ಲಿಸುವುದಷ್ಟೇ ಅಲ್ಲದೇ ಇದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿದ್ದರು. ಯಾರದರು ಚಿಕಿತ್ಸೆಗೆಂದು ಬಂದರೆ 10 ರಿಂದ 20 ರೂಪಾಯಿಗಳನ್ನ ಮಾತ್ರ ಚಿಕಿತ್ಸಾ ವೆಚ್ಚವಾಗಿ ತೆಗೆದುಕೊಳ್ಳುತ್ತಿದ್ದರು. ಒಂದು ವೇಳೆ ರೋಗಿಗಳ ಬಳಿ ಹಣ ಇಲ್ಲದಿದ್ದರೇ ದಾರಿ ಖರ್ಚಿಗೆ ಹಣ ಕೊಟ್ಟು ಕಳಿಸುತ್ತಿದ್ದರು ಎಂದು ಇಲ್ಲಿನ ಜನರೇ ಹೇಳುತ್ತಾರೆ. ಕಳಸದ ಪ್ಲಾಂಟ್ರಸ್ ಕ್ಲಬ್ ಆವರಣದಲ್ಲಿ ಡಾಕ್ಟರ್ ಹೇಮಚಂದ್ರ ಪ್ರಸಾದ್ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದ್ದು ಸಾವಿರಾರು ಜನರು ಬಂದು ಸಂತಾಪ ಸೂಚಿಸಿದ್ದಾರೆ.