ಸಂತೆ ಮುಗಿಸಿ ಉಕ್ಕಿ ಹರಿತ್ತಿರುವ ಹೊಳೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಮೂವರು

Views: 0
ಹೊಳೆ ದಾಟುವಾಗ ಮೂವರು ಕೊಚ್ಚಿ ಹೋಗಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಅನಂತಗಿರಿ ಮಂಡಲದಲ್ಲಿ ನಡೆದಿದೆ.
ಕಾಶಿಪಟ್ಟಣಂನಲ್ಲಿ ವಾರದ ಸಂತೆ ಮುಗಿಸಿ ಮನೆಗೆ ಹೋಗಲೆಂದು ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ದಾಟುತ್ತಿದ್ದಾಗ ಘಟನೆ ಸಂಭವಿಸಿದೆ.
ನಾಪತ್ತೆಯಾದವರನ್ನು 25 ವರ್ಷದ ಕುಮಾರ್, 40 ವರ್ಷದ ಕಮಲಾ ಮತ್ತು 52 ವರ್ಷದ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಇನ್ನು, ನೀರಿನಲ್ಲಿ ಕೊಚ್ಚಿಹೋಗ್ತಿರೋ ಭಯಾನಕ ದೃಶ್ಯ ಕೂಡ ಅಲ್ಲೇ ಇದ್ದವರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಂಧ್ರಪ್ರದೇಶದಲ್ಲಿ ಕಳೆದು 5 ದಿನಗಳಿಂದ ಅಬ್ಬರಿಸಿದ ಮಿಚಾಂಗ್ ಚಂಡಮಾರುತ ಸಾಕಷ್ಟು ಬೆಳೆ ಹಾನಿ ಮಾಡಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆ, ವಿಶಾಖಪಟ್ಟಣ ಹಾಗೂ ಬಾಪಟ್ಲಾ ಸೇರಿದಂತೆ ಇನ್ನೂ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗಿದ್ದು, ಸುತ್ತಲೂ ಕೆರೆಗಳಂತೆ ನೀರು ಸಂಗ್ರಹವಾಗಿದೆ. ಇನ್ನೂ ಈ ಮೈಚಾಂಗ್ ಚಂಡಮಾರುತಕ್ಕೆ ಸಿಕ್ಕ ತೆಂಗಿನ ಮರಗಳು ಹಾಗೂ ಬಾಳೆ ಗಿಡಗಳು ನೆಲಕ್ಕಪ್ಪಳಿಸಿವೆ. ಹಾಗೂ ಜೋಳ, ಭತ್ತ ಸೇರಿದಂತೆ ರೈತರು ಬೆಳೆದಿದ್ದ ಇನ್ನಿತರ ಬೆಳೆಗಳು ಜಲ ಸಮಾಧಿಯಾಗಿವೆ.
ತಮಿಳುನಾಡಿನಾದ್ಯಂತ 5 ದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದ ಮಿಚಾಂಗ್ ಚಂಡಮಾರುತ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿ ಮಾಡಿದೆ. ಮಳೆ ಸಂಬಂಧಿತ ಅವಘಢದಲ್ಲಿ ಚೆನ್ನೈನಲ್ಲಿ 3 ಮಂದಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 12 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಸೈಕ್ಲೋನ್ ಎಫೆಕ್ಟ್ ತಗ್ಗಿದ್ದು ಮಳೆ ಕೂಡ ಕಡಿಮೆಯಾಗಿದೆ. ಆದ್ರೆ, ಸಮಸ್ಯೆಗಳು ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಿಸಲು ವಾಯುಪಡೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದೆ. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ಬಂದರಿನ ಸಮೀಪದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಜನರಿಗೆ ಹೆಲಿಕಾಪ್ಟರ್ ಮೂಲಕ ಸರಿಸುಮಾರು 400 ಕೆಜಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.






