ಮೈಚಾಂಗ್ ಚಂಡಮಾರುತಕ್ಕೆ ತ.ನಾಡು ತತ್ತರ,ಶಾಲಾ-ಕಾಲೇಜಿಗೆ ರಜೆ,ರೈಲು-ವಿಮಾನ ಯಾನ ರದ್ದು, ಧಾರಾಕಾರ ಮಳೆ, ಹೈಅಲರ್ಟ್ ಘೋಷಣೆ

Views: 1
ಚೆನ್ನೈ,- ಮೈಚಾಂಗ್ ಚಂಡಮಾರುತ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಅಬ್ಬರಿಸಿದ ಪರಿಣಾಮ ಭಾರಿ ಮಳೆಯಿಂದ ಚೆನ್ನೈನ ಬಹುತೇಕ ಕಡೆ ಜಲಾವೃತವಾಗಿದು, ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿದ್ದಾರೆ. ಈ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯತನಕ ಚೆನ್ನೈ ವಿಮಾನನಿಲ್ದಾಣದಲ್ಲಿ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಜೊತೆಗೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಅಗತ್ಯವಿರುವ ಖಾಸಗೀ ಕಚೇರಿಗಳಲ್ಲಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.
ಚೆನ್ನೈ ಪೂರ್ವ ಕರಾವಳಿ ರಸ್ತೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಜಾರ್ಖಂಡ್ ಮೂಲದ ಶೇಕ್ ಅಫ್ರಾಜ್ ಮತ್ತು ಎಂಡಿ ತೋಫಿಕ್ ಎಂದು ಗುರುತಿಸಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಚೆನ್ನೈನ ಪೂರ್ವ ಕರಾವಳಿ ರಸ್ತೆಯ ಕಾನತ್ತೂರ್ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದಿದೆ ಎಂದು ತಿಳಿಸಿದ್ದಾರೆ.ಮೈಚಾಂಗ್ ಚಂಡಮಾರುತ ಚೆನ್ನೈನ ಪೂರ್ವ-ಈಶಾನ್ಯದಿಂದ 100 ಕಿಮೀ ದೂರದಲ್ಲಿದೆ ಮತ್ತು ಕಳೆದ ೬ ಗಂಟೆಗಳಲ್ಲಿ ಗಂಟೆಗೆ 10 ಕಿಮೀ ವೇಗದಲ್ಲಿ ಚಲಿಸಿದೆ. ವಾಯುವ್ಯ ದಿಕ್ಕಿನಲ್ಲಿ ಚಲಿಸುವ ನಿರೀಕ್ಷೆಯಿದೆ. ನಾಳೆ ಮಧ್ಯಾಹ್ನ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಚಂಡಮಾರುತ ಅಪ್ಪಳಿಸಲಿದೆ.
ತಮಿಳುನಾಡು, ಪುದುಚೆರಿ, ಒಡಿಶಾ, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ.ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ರೈಲು ಸಂಚಾರ ರದ್ದು:
ಕೊಯಮತ್ತೂರು ಮತ್ತು ಮೈಸೂರಿಗೆ ಹೋಗುವ ರೈಲುಗಳು ಸೇರಿದಂತೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ಆರು ರೈಲುಗಳನ್ನು ರದ್ದುಗೊಳಿಸಲಾಗಿದೆ. ರೈಲು ರದ್ದತಿಯಿಂದ ತೊಂದರೆಗೊಳಗಾದ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಧಾರಾಕಾರ ಮಳೆ: ತತ್ತರಿಸಿದ ಜನತೆ
ಪ್ರಸ್ತುತ ಬಂಗಾಳಕೊಲ್ಲಿಯಲ್ಲಿರುವ ಮೈಚಾಂಗ್ ಚಂಡಮಾರುತ ಆಂಧ್ರ ಕರಾವಳಿಯತ್ತ ಸಾಗುತ್ತಿದ್ದು, ತಮಿಳುನಾಡು ಮತ್ತು ಪುದುಚೆರಿಯಲ್ಲಿ ಧಾರಾಕಾರ ಮಳೆಯಾಗಿದೆ. ತಮಿಳುನಾಡಿನ ಉತ್ತರ ಕರಾವಳಿಯಲ್ಲಿ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ ಮತ್ತು ಕಡಲೂರು ಜಿಲ್ಲೆಗಳನ್ನು ಒಳಗೊಂಡಂತೆ ಭಾರೀ ಮಳೆಯಾಗುತ್ತಿದೆ ಎಂದು ವರದಿಯಾಗಿದೆ, ತಿರುವಳ್ಳೂರು ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚೆನ್ನೈನ ಬಹುತೇಕ ಭಾಗಗಳು ನೀರಿನಲ್ಲಿ ಮುಳುಗಿದ್ದು, ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮುಳುಗಡೆಯಾಗಿದೆ. ನಾಳೆ ಮಧ್ಯಾಹ್ನ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಚಂಡಮಾರುತ ಅಪ್ಪಳಿಸಲಿದೆ.
ಚೆನ್ನೈ ನಗರ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದೆ, ಇಂದು ಬೆಳಿಗ್ಗೆ 5.30 ರವರೆಗಿನ 24ಗಂಟೆಗಳಲ್ಲಿ ಮೀನಂಬಾಕ್ಕಂನಲ್ಲಿ 196 ಮಿಮೀ ಮತ್ತು ನುಂಗಂಬಾಕ್ಕಂನಲ್ಲಿ154.3 ಮಿಮೀ ಮಳೆಯಾಗಿದೆ.
ಶಾಲಾ ಕಾಲೇಜಿಗೆ ರಜೆ
ಭಾರಿ ಮಳೆಯಿಂದ ಚೆನ್ನೈ ಮತ್ತು ಪಕ್ಕದ ಮೂರು ಜಿಲ್ಲೆಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯ ಸರ್ಕಾರ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ.
ನಗರ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಕರಾವಳಿ ಜಿಲ್ಲೆಗಳಲ್ಲಿ ಅಧಿಕಾರಿಗಳು ಸುಮಾರು 5000 ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ.
ಸಿಎಂ ಪರಿಸ್ಥಿತಿ ಪರಾಮರ್ಶೆ
ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುತ್ತರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಖುದ್ದಾಗಿ ಪರಿಸ್ಥಿತಿ ಪರಾಮರ್ಶೆ ನಡೆಸಿದ್ಧಾರೆ.
ಮೈಚಾಂಗ್ ಚಂಡಮಾರುತವನ್ನು ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ .ಸಚಿವರು, ಅಧಿಕಾರಿಗಳು ಕ್ಷೇತ್ರದಲ್ಲಿದ್ದಾರೆ. ಸಾರ್ವಜನಿಕರು ಒದಗಿಸಿದ ಸುರಕ್ಷತಾ ಪೊರೀಟೋಕಾಲ್‌ಗಳನ್ನು ಅನುಸರಿಸಬೇಕು. ಚಂಡಮಾರುತದ ಪ್ರಭಾವ ಕಡಿಮೆಯಾಗುವವರೆಗೆ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರಬಾರದು ಎಂದು ಮನವಿ ಮಾಡಿದ್ದಾರೆ
ವೀಸಾ ನೇಮಕಾತಿ ರದ್ದು
ಚೆನ್ನೈನಲ್ಲಿರುವ ಅಮೇರಿಕಾದ ಕಾನ್ಸುಲೇಟ್ ಕಚೇರಿ ಎಲ್ಲಾ ವೀಸಾ ನೇಮಕಾತಿಗಳನ್ನು ರದ್ದುಗೊಳಿಸಿದೆ. ಮೈಚಾಂಗ್‌ನಿಂದಾಗಿ ಇಂದು ಎಲ್ಲಾ ನಿಗದಿತ ಕಾನ್ಸುಲರ್ ನೇಮಕಾತಿ ರದ್ದುಗೊಳಿಸಲಾಗಿದೆ.
ಅಮೇರಿಕಾ ಕಾನ್ಸುಲೇಟ್ ಜನರಲ್ ಚೆನ್ನೈ, ಅಮೇರಿಕನ್ ಸೆಂಟರ್ ಮತ್ತು ಎಜುಕೇಶನ್‌ಯುಎಸ್‌ಎ ಕಚೇರಿಯು ಸಾರ್ವಜನಿಕರಿಗೆ ಮುಚ್ಚಿರುತ್ತದೆ” ಎಂದು ಅಮೇರಿಕಾದ ಕಾನ್ಸುಲೇಟ್ ಕಚೇರಿಯಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ದೃಢಪಡಿಸಿದ ಅಪಾಯಿಂಟ್‌ಮೆಂಟ್‌ಗಳನ್ನು ಹೊಂದಿರುವ ಅರ್ಜಿದಾರರು ವೀಸಾ ಅರ್ಜಿಯನ್ನು ಸಲ್ಲಿಸಲು ನೇಮಕಾತಿ ಪತ್ರದ ಪ್ರಿಂಟ್‌ಔಟ್‌ಗಳೊಂದಿಗೆ 5 ಡಿಸೆಂಬರ್‌ನಿಂದ 8 ಡಿಸೆಂಬರ್‌ವರೆಗೆ ಭೇಟಿ ನೀಡಬಹುದು ಎಂದು ಹೇಳಿದೆ.






