ಮೇಲು-ಕೀಳು ಭೇದ ಭಾವವಿಲ್ಲದ ಜಾತ್ಯಾತೀತ ಸಮಸಮಾಜ ನಿರ್ಮಿಸಲು ಶ್ರಮಿಸಿದ ವಿಶ್ವಮಾನವ ಕನಕದಾಸ: ಸಿಎಂ

Views: 1
ದಾಸಶ್ರೇಷ್ಠ ಕನಕದಾಸರ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕನಕ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ಹೆಚ್. ಆಂಜನೇಯ ಮತ್ತಿತರರು ಇದ್ದಾರೆ.
ಬೆಂಗಳೂರು, ಸಾಮಾನ್ಯ ಜನರಿಗೆ ಗುಣಮಟ್ಟದ ಆಹಾರ ಒದಗಿಸಲು ಈ ವರ್ಷ ಹೆಚ್ಚುವರಿಯಾಗಿ188 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ದಾಸಶ್ರೇಷ್ಠ ಕನಕದಾಸರ ಜಯಂತಿ ದಿನವಾದ ಇಂದು ಶಾಸಕರ ಭವನದ ಆವರಣದಲ್ಲಿರುವ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಇರುವ ಕಡೆ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುತ್ತೇವೆ. ಬೆಂಗಳೂರಿನ ಎಲ್ಲಾ 225ವಾರ್ಡ್‌ಗಳಲ್ಲೂ ಇಂದಿರಾ ಕ್ಯಾಂಟೀನ್ ಇರಲಿದೆ. ಇಂದಿರಾ ಕ್ಯಾಂಟೀನ್ ಸ್ಥಳ ಅಭಾವ ಇರುವ ಕಡೆ ಮೊಬೈಲ್ ಕ್ಯಾಂಟೀನ್ ಆರಂಭಿಸುತ್ತೇವೆ ಎಂದರು.
ಇಂದಿರಾ ಕ್ಯಾಂಟೀನ್‌ಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಯಾಂಟೀನ್‌ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಗಮನ ಹರಿಸಿದ್ದೇವೆ. ಸಾಮಾನ್ಯರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ ಎಂದರು.
ಶಾಸಕ ಬಿ.ಆರ್. ಪಾಟೀಲ್ ಅವರ ಜತೆ ಮಾತನಾಡಿದ್ದೇನೆ. ಅವರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಮನವೊಲಿಸಿರುವುದಾಗಿಯೂ ಹೇಳಿದ ಅವರು, ಶಾಸಕರ ಅಹವಾಲನ್ನು ಆಲಿಸಿ ಸಮಸ್ಯೆ ಪರಿಹಾರಕ್ಕೂ ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದರು.
ನಿಮ್ಹಾನ್ಸ್‌ನಲ್ಲಿ ರೋಗಿಗಳಿಗೆ ಹಾಸಿಗೆ ಸಿಗದೆ ರೋಗಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಿಮ್ಹಾನ್ಸ್ ನಿರ್ದೇಶಕರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಕನಕದಾಸರು ದಾಸಶ್ರೇಷ್ಠ
ನಾಡು ಕಂಡ ದಾಸಶ್ರೇಷ್ಠ ಕನಕದಾಸರು ಸಮಸಮಾಜದ ಕನಸು ಕಂಡಿದ್ದರು. ಅವರು ಸಮಾಜ ಸುಧಾರಕರಾಗಿದ್ದರು. ಅವರ ಸಾಹಿತ್ಯದ ಮೂಲಕ ಮನುಷ್ಯತ್ವವನ್ನು ಸಾರಿದ್ದರು ಎಂದು ಇದೇ ಸಂದರ್ಭದಲ್ಲಿ ಕನಕದಾಸರನ್ನು ಸ್ಮರಿಸಿದರು.ಮೇಲು-ಕೀಳು ಭೇದ ಭಾವವಿಲ್ಲದ ಜಾತ್ಯಾತೀತ ಸಮಸಮಾಜ ನಿರ್ಮಿಸಲು ಶ್ರಮಿಸಿದ ವಿಶ್ವಮಾನವ ಕನಕದಾಸ ಎಂದು ಹೇಳಿದ ಮುಖ್ಯಮಂತ್ರಿಗಳು ರಾಮಧ್ಯಾನ ಚರಿತೆ, ಮೋಹನ ತರಂಗಿಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಸಮಾಜದ ತಾರತಮ್ಯ ಹೋಗಲಾಡಿಸಲು ಹೋರಾಡಿದ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಸರ್ಕಾರ ಇಂದು ಆಚರಿಸುತ್ತಿದೆ ಎಂದರು.ಕನಕದಾಸರು ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ, ಹೆಚ್. ಆಂಜನೇಯ, ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.








