5ನೇ ತರಗತಿಯ ವಿದ್ಯಾರ್ಥಿನಿ ಶವ ಪತ್ತೆ: ಲೈಂಗಿಕ ದೌರ್ಜನ್ಯ ನಡೆಸಿ, ಹತ್ಯೆ; ಪೋಷಕರು ಆರೋಪಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
Views: 86
ಕನ್ನಡ ಕರಾವಳಿ ಸುದ್ದಿ: 10 ವರ್ಷದ ಬಾಲಕಿ ನಾಪತ್ತೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕೊಯಮತ್ತೂರು ಜಿಲ್ಲೆಯ ಸುಲೂರಿನಲ್ಲಿ ನಡೆದಿದೆ.
5ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಮೇ 21 ರಂದು ಹತ್ತಿರದ ದಿನಸಿ ಅಂಗಡಿಗೆ ತೆರಳಿದ್ದಳು. ಆದರೆ , ಆಕೆ ಎಷ್ಟೊತ್ತಾದರೂ ಮನೆಗೆ ಮರಳಿರಲಿಲ್ಲ. ಪೋಷಕರ ತೀವ್ರ ಹುಡುಕಾಟದ ನಂತರವೂ ಆಕೆಯ ಸುಳಿವು ಪತ್ತೆಯಾಗಿರಲಿಲ್ಲ. ಈ ವೇಳೆ, ದ್ವಿ ಚಕ್ರ ವಾಹನದಲ್ಲಿ ಅಪರಿಚಿತರು ಆಕೆಯನ್ನು ಕರೆದೊಯ್ದ ಸುದ್ದಿ ಲಭಿಸಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಾಲಕಿ ಪತ್ತೆ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದರು.
ಶೋಧ ಕಾರ್ಯಾಚರಣೆ ಸಮಯದಲ್ಲಿ ನಿನ್ನೆ ಕನ್ನಂಪಲಯಂ ಕೆರೆ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಬಾಲಕಿ ಸಾವಿಗೆ ಮುನ್ನ ಲೈಂಗಿಕ ದೌರ್ಜನ್ಯ ನಡೆಸಲಾಗಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸಿದ್ದಾರೆ.
ಈ ಘಟನೆಯು ಸಂಬಂಧಿಕರು ಮತ್ತು ಸ್ಥಳೀಯರಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಂತಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸುಲೂರಿನ ಪೊಲೀಸ್ ಠಾಣೆ ಮುಂದಿನ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು.
ರಾತ್ರಿ 9.30ರಿಂದ ಬೆಳಗಿನ ಜಾವದವರೆಗೆ ಸುಮಾರು 9 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಪರ್ಯಾಯ ರಸ್ತೆಗಳ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.
ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ ಬಾಲಕಿಯನ್ನು ಅಪಹರಣ ಮಾಡಿ, ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸಿಸಿಟಿಬಿ ದೃಶ್ಯಗಳ ಆಧಾರದ ಮೇಲೆ ಆತನ ಜಾಡು ಹಿಡಿದು ಪೊಲೀಸರು ಕಾರ್ತಿಕನನ್ನು ಬಂಧಿಸಿದ್ದಾರೆ. ಈ ವೇಳೆ ಆತ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ನಡುವೆ ಈತನಿಗೆ ಸಹಾಯ ಮಾಡಿದ ಮತ್ತೊಬ್ಬ ಆರೋಪಿ ಮೋಹನ್ರಾಜ್ನನ್ನೂ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ಸಂಬಂಧಿಕರು ಆರೋಪಿಸುವಂತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಹತ್ಯೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಪಶ್ಚಿಮ ವಲಯ ಐಜಿ ರಮ್ಯಾ ಭಾರತಿ, ಉಪ ಮಹಾನಿರೀಕ್ಷಕ ಸಾಮಿನಾಥನ್ ಮತ್ತು ಕೊಯಮತ್ತೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭವನ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಸುಲೂರಿನಲ್ಲಿ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆರೋಪಿ ಕಾರ್ತಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದು, ಈ ಪ್ರಯತ್ನದಲ್ಲಿ ಅವನ ಕೈ ಮತ್ತು ಕಾಲಿನ ಮೂಳೆ ಮುರಿತ ಉಂಟಾಗಿದ್ದು, ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.






