ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಟ್ವಾಳ ಖಜಾನೆಯ ಇಬ್ಬರು ಸಿಬ್ಬಂದಿ ಲೋಕಾ ಬಲೆಗೆ

Views: 50
ಕನ್ನಡ ಕರಾವಳಿ ಸುದ್ದಿ: ಲಂಚಕ್ಕೆ ಕೈ ಚಾಚಿದ ಆರೋಪದಲ್ಲಿ ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಪ್ರಥಮ ದರ್ಜೆ ಸಹಾಯಕ ಬಸವೇಗೌಡ ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ದೂರುದಾರ ಮಹಿಳೆಯ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು 2023ರ ಅಕ್ಟೋಬರ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ್ದರು. ಆನಂತರ, 2024ರ ಜೂನ್ ತಿಂಗಳಿನಲ್ಲಿ ಅವರು ದಿಢೀರ್ ಮೃತಪಟ್ಟಿದ್ದರು. ಗಂಡನ ಹೆಸರಿಗೆ ಬರುತ್ತಿದ್ದ ಪಿಂಚಣಿ ಮೊತ್ತವನ್ನು ತನ್ನ ಹೆಸರಿಗೆ ಮಾಡಿಸಲು ಮಹಿಳೆ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಮುಖ್ಯ ಲೆಕ್ಕಿಗ ಭಾಸ್ಕರ್ ಎಂಬವರ ಬಳಿಗೆ ತೆರಳಿದ್ದರು. ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರಲಿಲ್ಲ. ಇತ್ತೀಚೆಗೆ ಮಹಿಳೆಯ ಖಾತೆಗೆ ಗಂಡನ ಪಿಂಚಣಿ ಮೊತ್ತ ಜಮೆ ಮಾಡಿಸಿದ್ದು ಪ್ರತಿಯಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವ ಗೌಡ ಬಿ.ಎನ್. ಎಂಬವರು ತಲಾ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಮಹಿಳೆ ನೀಡಿದ ದೂರಿನಂತೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಧ್ಯಾಹ್ನ 2 ಗಂಟೆಯ ಬಳಿಕ ಖಜಾನೆಗೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾಸ್ಕರ್ ಹಾಗೂ ಬಸವೇಗೌಡ ಲಂಚ ಸ್ವೀಕರಿಸುತ್ತಿದ್ದರು. ಇದೀಗ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷರಾದ ಡಾ.ಗಾನ ಪಿ.ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಅವರು ಸಿಬ್ಬಂದಿ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.