ರಾಜಕೀಯ

ರಾಜಕೀಯ ಉದ್ದೇಶಕ್ಕಾಗಿ ಜಾತಿ ಗಣತಿ ವರದಿಯನ್ನು ವಿರೋಧಿಸುವುದು ಸರಿಯಲ್ಲ: ಜಯಪ್ರಕಾಶ್ ಹೆಗ್ಡೆ 

Views: 116

ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಜಾತಿ ಗಣತಿ ಅಲ್ಲವೇ ಅಲ್ಲ. ಮಾಡಿರುವ ಸಮೀಕ್ಷೆಯಲ್ಲಿ ಜಾತಿ ಒಂದು ಅಂಶ ಅಷ್ಟೇ. ಜನರು ಹೇಳಿರುವ ಜಾತಿಯನ್ನು ಬರೆದುಕೊಳ್ಳಲಾಗಿದೆ. ಜನರ ಜಾತಿಯನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೋಮವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಎಷ್ಟು ಜಾತಿಗಳಿವೆಯೋ ಎಲ್ಲವನ್ನೂ ಜಾತಿ ಗಣತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿ ಕುರಿತು ಸಂಪುಟದಲ್ಲಿ ಚರ್ಚೆ ಆದ ನಂತರ ಹೇಳಿಕೆ ಕೊಡೋಣ ಎಂದಿದ್ದೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಗೊಂದಲ ಉಂಟಾಗಿರುವುದರಿಂದ ಸ್ಪಷ್ಟನೆ ನೀಡಬೇಕಾಗಿದೆ’ ಎಂದರು.

ವರದಿ ಸಾರ್ವಜನಿಕಗೊಂಡ ನಂತರ ಚರ್ಚೆ ಮಾಡಬಹುದು. ವರದಿಯಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ತಪ್ಪಾಗಿದ್ದರೆ ಸರಿ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಶೇ 95 ರಷ್ಟು ಸರಿ ಇದೆ ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಏನನ್ನೂ ನೋಡದೆ ಇದು ವೈಜ್ಞಾನಿಕ ವರದಿ ಅಲ್ಲ ಎನ್ನಬಾರದು ಎಂದರು.

ಸಿದ್ದರಾಮಯ್ಯ ಅವರು ವರದಿ ಬರೆಯಿಸಿದ್ದಾರೆ ಎನ್ನುವುದು ಸರಿಯಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿ ಸಮೀಕ್ಷೆ ನಡೆಸಿದ್ದಾರೆ. ತರಬೇತಿ ಪಡೆದ ಶಿಕ್ಷಕರು ಪ್ರತಿ ಹಳ್ಳಿಗೆ ಹೋಗಿ ಸಮೀಕ್ಷೆ ಮಾಡಿದ್ದಾರೆ. ಯಾವ ಶಿಕ್ಷಕರಿಗೂ ವೈಯಕ್ತಿಕ ಆಸಕ್ತಿ ಇರಲು ಸಾಧ್ಯವಿಲ್ಲ. ನೀಡಿರುವ ನಮೂನೆಯನ್ನು ತುಂಬಿಸಿಕೊಂಡು ಬಂದಿದ್ದಾರೆ. ಇದು ಖಾಸಗಿ ಅವರು ತಯಾರಿಸಿದ ವರದಿಯಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಅಥವಾ ನಮ್ಮ ಪಕ್ಷದವರು ಇದನ್ನು ವಿರೋಧಿಸುವುದು ಸರಿಯಲ್ಲ. 6.30 ಕೋಟಿ ಜನಸಂಖ್ಯೆ ಇತ್ತು. 5.98 ಕೋಟಿ ಜನರನ್ನು ಒಳಗೊಂಡಿದೆ. ನನ್ನನ್ನು ಅಧ್ಯಕ್ಷನಾಗಿ ನೇಮಿಸಿದ್ದು ಬಿಜೆಪಿ ಸರಕಾರ. ಸಮಿತಿಯ ಎಲ್ಲ ಸದಸ್ಯರನ್ನು ನೇಮಿಸಿದ್ದು ಅದೇ ಸರಕಾರ. ಅದರ ಅವಧಿಯಲ್ಲೇ ಮಧ್ಯಂತರ ವರದಿ ಕೊಟ್ಟಿದ್ದೆವು. ಆಗ ಒಪ್ಪಿ ಈಗ ವಿರೋಧಿಸುವುದು ಸರಿಯಲ್ಲ. ದೊಡ್ಡ ಜಾತಿಗಳಿಗೆ ಆತಂಕ ಕಾಡಲು ಕಾರಣ ಇದೆ. ತಮ್ಮ ಜಾತಿಗಳ ಸಂಖ್ಯೆ ಜಾಸ್ತಿ ಇದೆ ಎಂದು ಎಲ್ಲರ ಅಭಿಪ್ರಾಯ ಇತ್ತು. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿದ ಬಳಿಕ ಸತ್ಯಾಂಶ ಬಯಲಾಗಲಿದೆ.

Related Articles

Back to top button