ಬಸ್ರೂರು ಗ್ರಾಮ ಪಂಚಾಯತ್‌ನ ಅಂಗಡಿಕೋಣೆ ನೀಡುವುದಾಗಿ ವಂಚನೆ: ಸಿಇಒಗೆ ಮಂಜುನಾಥ ಶೆಟ್ಟಿಗಾರ ದೂರು

Views: 148
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಗ್ರಾಮ ಪಂಚಾಯತ್‌ನ ಅಂಗಡಿ ಕೋಣೆ ಬಾಡಿಗೆ ನೀಡುವುದಾಗಿ ಮುಂಗಡ ಹಣ ಮತ್ತು ಬಾಡಿಗೆ ಪಡೆದು ವಂಚಿಸಿದ ಪಂಚಾಯತ್ ವಿರುದ್ಧ ದೂರು ನೀಡಿದ ಪ್ರಕರಣ ನಡೆದಿದೆ.
ಬಸ್ರೂರು ಗ್ರಾಮ ಪಂಚಾಯತ್‌ನ ಅಂಗಡಿಕೋಣೆಯೊಂದನ್ನು ಬಾಡಿಗೆಗೆ ನೀಡಿ ಮುಂಗಡ ಹಣ 18 ಸಾವಿರ ರೂ., 3 ಸಾವಿರ ರೂ.ಗಳಂತೆ 2 ತಿಂಗಳ ಬಾಡಿಗೆ ಹಣ ಪಡೆದು, ಅಂಗಡಿ ಕೋಣೆಯನ್ನು ಬೇರೆಯವರಿಗೆ ನೀಡಿ ಅನ್ಯಾಯ ಮಾಡಿರುವುದಾಗಿ ಬಸ್ರೂರಿನ ನಿವಾಸಿ ಮಂಜುನಾಥ್ ಶೆಟ್ಟಿಗಾರ್ ಅವರು ಬಸ್ರೂರು ಗ್ರಾಮ ಪಂಚಾಯತ್ ವಿರುದ್ಧ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
2023 ಜನವರಿ 22 ಹಾಗೂ 23 ಮುಂಗಡ ಹಣ ನೀಡಿ ಮತ್ತು ಎರಡು ತಿಂಗಳ ಬಾಡಿಗೆ ತೆಗೆದುಕೊಂಡ ಬಗ್ಗೆ ರಶೀದಿ ನನ್ನಲ್ಲಿದೆ. ಆದರೆ ಅಂಗಡಿ ಕೋಣೆಯನ್ನು ಅನಂತರ ಬೇರೊಬ್ಬರಿಗೆ ನೀಡುವ ಮೂಲಕ ಗ್ರಾ.ಪಂ.ಅನ್ಯಾಯ ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ: ಬಸ್ರೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಏಲಂನಲ್ಲಿ ಮಂಜುನಾಥ್ ಶೆಟ್ಟಿಗಾರರಿಗೆ ರೂ.4,500 ಫಿಕ್ಸ್ ಆಗಿತ್ತು. ಅದಾದ ಮೇಲೆ ಪಂಚಾಯತ್ ಸದಸ್ಯ ಸದಾನಂದ ಅವರು ತನ್ನ ಹೆಂಡತಿ ಹೆಸರಿಗೆ 4,800 ರೂಪಾಯಿಗೆ ಕೂಗಿದ್ದರಿಂದ ವಾದ ವಿವಾದ ನಡೆದು ಸೇರಿದ ಗ್ರಾಮಸ್ಥರು ಪುನಃ ಏಲಂ ಮಾಡಿ ಎಂದು ಕೇಳಿಕೊಂಡಾಗ ಪಂಚಾಯಿತಿಯವರು ಬೆಳಿಗ್ಗೆ 10 ಗಂಟೆಯೊಳಗೆ ನಿಮ್ಮ ಹಣ ಪಂಚಾಯತ್ ನಲ್ಲಿ ಕಟ್ಟಿ ಎಂದು ಶೆಟ್ಟಿಗಾರರಿಗೆ ಸೂಚಿಸಿದರು. ಬೆಳಿಗ್ಗೆ ಹಣ ಹಿಡಿದುಕೊಂಡು ಹೋಗಿ ಪಂಚಾಯಿತಿಗೆ ಕಟ್ಟುವಷ್ಟರಲ್ಲಿ ಸದಾನಂದ ಅವರು ತಮ್ಮ ಪತ್ನಿ ಹೆಸರಿಗೆ ಹಣವನ್ನು ಕಟ್ಟಿಸಿಕೊಂಡಿದ್ದಾರೆ ಅದಾದ ಮೇಲೆ ಅಗ್ರಿಮೆಂಟಿಗೆ ಸೈನ್ ಸಹ ಹಾಕಿಸಿಕೊಂಡಿದ್ದಾರೆ.
ಅನ್ಯಾಯಕ್ಕೆ ಒಳಗಾದ ಮಂಜುನಾಥ್ ಶೆಟ್ಟಿಗಾರ ಮತ್ತು ಗ್ರಾಮಸ್ಥರು ಪುನಃ ಸಾರ್ವಜನಿಕವಾಗಿ ಏಲಂ ಮಾಡಿ ಯಾವ ಕಾರಣಕ್ಕೂ ಸದಾನಂದ ಅವರಿಗೆ ಅಂಗಡಿ ರೂಮ್ ಕೊಡಲು ಸಾಧ್ಯವಿಲ್ಲ ಮಂಜುನಾಥ್ ಶೆಟ್ಟಿಗಾರ್ ಅವರಿಗೆ ಕೊಡಿ ಇಲ್ಲವೇ ಖರ್ಚು ಮಾಡಿದ ಹಣವನ್ನಾದರೂ ನೀಡಿ ಎಂದು ನ್ಯಾಯಕ್ಕಾಗಿ ಮೊರೆ ಹೋಗಿದ್ದರು.