15 ವರ್ಷಗಳ ಬಳಿಕ ವಿದ್ಯುತ್ ದರ ಇಳಿಕೆ: ಖುಷಿ ಸುದ್ದಿ ನೀಡಿದ ರಾಜ್ಯ ವಿದ್ಯುತ್ಚ್ಛಕ್ತಿ ಆಯೋಗ..!

Views: 170
ಬೆಂಗಳೂರು,: ಕರ್ನಾಟಕದ ಜನರಿಗೆ ಕರ್ನಾಟಕ ರಾಜ್ಯ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗವು ಎಲ್ಲ ವರ್ಗದ ವಿದ್ಯುತ್ ಬಳಕೆದಾರರಿಗೆ ಖುಷಿ ನೀಡುವ ಸುದ್ದಿಯೊಂದು ಹೊರಬಿದ್ದಿದ್ದು, ಬರೋಬ್ಬರಿ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ.
ಗೃಹ ಬಳಕೆಯಲ್ಲಿ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.10 ರೂ. ಕಡಿಮೆ ಮಾಡಲಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಏಪ್ರಿಲ್ 01 ಸೋಮವಾರದಿಂದಲೇ ಜಾರಿಯಾಗಲಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಲಾಗಿದೆ.
ಈ ಹಿಂದೆ ಪ್ರತಿ ಯುನಿಟ್ ಗೆ 0-100ರ ವರೆಗೆ 4.75 ಪೈಸೆ ಇತ್ತು. 100ರ ಮೇಲಿನ ಬಳಕೆಯ ಪ್ರತಿ ಯುನಿಟ್‌ಗೆ 7 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಆದರೆ ಇಂದಿನಿಂದ ದರ ಪರಿಷ್ಕರಣೆ ಮಾಡಲಾಗಿದ್ದು, 100 ಯುನಿಟ್ ಮೇಲಿನ ಬಳಕೆದಾರರ ಪ್ರತಿ ಯುನಿಟ್‌ಗೆ 5.90 ರೂಪಾಯಿ ಮಾತ್ರ ಪಾವತಿ ಮಾಡಬೇಕಾಗಿದೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಗೃಹಜ್ಯೋತಿ ಜಾರಿಯಲ್ಲಿದೆ. ಈ ಯೋಜನೆಯ ಪ್ರಕಾರ 200 ಯುನಿಟ್ ಒಳಗೆ ಬಳಸುವವರಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಹೀಗಾಗಿ ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ ಎಂದು ವರದಿಯಾಗಿದೆ.
ಹೀಗಾಗಿ 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ವಿದ್ಯುತ್ ದರ ಕಡಿಮೆಯಾಗಲಿದೆ. ಮುಖ್ಯವಾದ ವಿಚಾರವೆಂದರೆ ಪರಿಷ್ಕೃತ ದರದ ಬಿಲ್ ಗ್ರಾಹಕರಿಗೆ ಏಪ್ರಿಲ್ನಲ್ಲಿ ಬರುವ ಬಿಲ್ನಲ್ಲಿ ಬರುವುದಿಲ್ಲ. ಬದಲಾಗಿ ಮೇ ತಿಂಗಳಿನಲ್ಲಿ ಬರುವ ಬಿಲ್ನಲ್ಲಿ ಈ ದರ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.