ಆರೋಗ್ಯ

ಹೃದಯಾಘಾತಕ್ಕೆ ಮುನ್ಸೂಚನೆಗಳೇನು?…. ವೈದ್ಯರು ಹೇಳುವುದೇನು..?

Views: 507

ಜನರಲ್ಲಿ ಹೃದಯಾಘಾತದ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದೆ. ನೋಡಲು ಫಿಟ್ ಆಗಿದ್ದರೂ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತಿದೆ ಎನ್ನುತ್ತಾ ಅನೇಕರು ನಮ್ಮಲ್ಲಿಗೆ ಬರುತ್ತಾರೆ. ಆಹಾರ ಪದ್ಧತಿ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಉದಾಹರಣೆಗೆ ದೇಹಕ್ಕೆ ಸುಸ್ತು, ಆಯಾಸ ಬೇಕು, ಆದರೆ ಅದು ಅತಿಯಾದರೂ ದೇಹಕ್ಕೆ ಸಮಸ್ಯೆಯೇ

ಹೃದಯಾಘಾತದ ಸೂಚನೆಗಳನ್ನು ದೇಹ ನೀಡಿದರೂ ಹೆಚ್ಚಿನ ಬಾರಿ ಗುರುತಿಸುವಲ್ಲಿ ವಿಫಲರಾಗುತ್ತೇವೆ. ಕಾರಣ, ಅಂಥ ಸೂಚನೆಗಳು ಯಾವುವು ಎಂಬುದೇ ನಮಗೆ ತಿಳಿದಿರುವುದಿಲ್ಲ. ಎದೆನೋವು ಮತ್ತು ಉಸಿರಾಡಲು ಕಷ್ಟವಾಗುವಂಥ ಸೂಚನೆಗಳು ಕಂಡಾಗಲೇ ನಮಗೆ ಹೃದಯದ ತೊಂದರೆ ಇರಬಹುದೆಂಬುದು ಅರಿವಾಗುತ್ತದೆ. ಆದರೆ ಇತರ ಕೆಲವು ಸೂಚನೆಗಳು ಆಸಿಡಿಟಿ, ಎದೆಯುರಿ, ಸುಸ್ತು ಮುಂತಾದ ಬೇರೆ ಸಮಸ್ಯೆಗಳ ಲಕ್ಷಣಗಳೂ ಆಗಿರಬಹುದಾದ್ದರಿಂದ ಮುಂಬರುವ ಅನಾಹುತವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಮುಂದಾಗಿ ಈ ಬಗ್ಗೆ ಕಾಳಜಿ ತೆಗೆದುಕೊಂಡಲ್ಲಿ ಆಗುವಂಥ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ. ಹೃದಯಾಘಾತವಾಗುವ ಹಲವಾರು ದಿನಗಳ ಮೊದಲಿನಿಂದಲೇ ಈ ಸೂಚನೆಗಳನ್ನು ದೇಹ ತೋರಿಸುತ್ತದೆ. ಕೆಲವೊಮ್ಮೆ ಒಂದು ತಿಂಗಳ ಮುನ್ನವೂ  ಇವು ಕಾಣಬಹುದು.

ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶ ರಕ್ತದ ಮೂಲಕ ಆಹಾರವಾಗಿ ಹೃದಯಕ್ಕೆ ಸೇರುತ್ತದೆ. ಅಂದರೆ ನಾವು ಸೇವಿಸುವ ಆಹಾರದಲ್ಲಿನ ಪೌಷ್ಟಿಕಾಂಶಗಳು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ ಪೋಷಣೆಯನ್ನು ನೀಡುತ್ತದೆ. ಹೃದಯಕ್ಕೆ ರಕ್ತನಾಳಗಳ ಮೂಲಕ ಹರಿಯುವ ರಕ್ತ ಹೆಪ್ಪುಗಟ್ಟಿದ ಸಂದರ್ಭದಲ್ಲಿ ಹೃದಯಾಘಾತ, ಎದೆನೋವು ಕಾಣಿಸಿಕೊಳ್ಳುತ್ತದೆ. ಇದು ದೇಹದಲ್ಲಿನ ಚಿಂತೆ, ಆಘಾತ ಜೊತೆಗೆ ದೇಹಕ್ಕೆ ತೀವ್ರವಾಗಿ ಒತ್ತಡ ಬಿದ್ದಾಗಲೂ ಸಂಭವಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಹೃದಯಕ್ಕೆ ಪೋಷಕಾಂಶ ಒದಗಿಸಲು ರಕ್ತನಾಳಗಳ ಕವಲುಗಳಿವೆ. ಅಂದರೆ ಮುಖ್ಯವಾದ ರಕ್ತನಾಳದ ಮೂಲಕ ಇತರ ಸಣ್ಣ ಪುಟ್ಟ ಕವಲುಗಳಲ್ಲಿ ರಕ್ತದ ಹರಿವು ಉಂಟಾಗುತ್ತದೆ. ಹೃದಯಕ್ಕೆ ರಕ್ತದ ಹರಿವು ನಿಂತಾಗ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ. ಇಲ್ಲವೇ ಮುಖ್ಯ ರಕ್ತ ನಾಳದಲ್ಲಿ ಅಡಚಣೆಗಳಾದರೆ ತೀವ್ರ ಅಪಾಯ ಉಂಟಅಗುವ ಸಾಧ್ಯತೆಗಳಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತಮ ಆಹಾರ ಪದ್ಧತಿ ಮನುಷ್ಯನಿಗೆ ಅತಿ ಅವಶ್ಯಕ. ಒಳ್ಳೆಯ ಜೀವನ ಶೈಲಿ ಮತ್ತು ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹೆಚ್ಚು ಕೊಬ್ಬಿನಾಂಶಭರಿತ ಆಹಾರವನ್ನು ಸೇವಿಸಿದರೆ ಆರೋಗ್ಯಕ್ಕೆ ಅಪಾಯ ಹೆಚ್ಚು. ಅತಿಯಾದ ಕೊಬ್ಬಿನಾಂಶ ದೇಹದಲ್ಲಿ ರಕ್ತದೊತ್ತಡವನ್ನು ಉಂಟು ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪು ಗಟ್ಟುವ ಮೂಲಕ ಆರೋಗ್ಯ ಹದಗೆಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ವ್ಯಾಯಾಮ ದೇಹಕ್ಕೆ ಬೇಕೇಬೇಕು. ಕೊಲೆಸ್ಟ್ರಾಲ್ ಕೊಬ್ಬಿನಾಂಶಗಳನ್ನು ಕಡಿಮೆ ಮಾಡಿಕೊಳ್ಳಲು ಜಿಮ್ ಮಾಡುವುದು, ವ್ಯಾಯಾಮ ಈ ರೀತಿಯಲ್ಲಿ ತೊಡಗಿಕೊಳ್ಳಬಹುದು. ಆದರೆ ಕೆಲವು ಬಾರಿ ದೇಹಕ್ಕೆ ಅತಿಯಾದ ಸುಸ್ತು ಆಯಾಸ ದೇಹದ ಅಂಗಗಳಿಗೆ ಒತ್ತಡವನ್ನುಂಟು ಮಾಡುತ್ತದೆ. ಅದು ಸಹ ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ನಿಯಮಿತವಾಗಿ ಮತ್ತು ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುವುದು ಅವಶ್ಯಕ.

ಎದೆಯಲ್ಲಿ ಬಿಗಿ, ಒತ್ತಡ

ಎದೆಯಲ್ಲಿ ಒತ್ತಡದ ಅನುಭವ, ಏನೋ ಹಿಂಡಿದಂತೆ, ಬಿಗಿದಂತೆ ಭಾಸವಾಗುವುದು, ನೋವು ಮುಂತಾದವೆಲ್ಲ ಆರಂಭದಲ್ಲಿ ಕಾಣುತ್ತವೆ. ಇಂಥವು ಏನೇ ಕಂಡರೂ ಹೃದಯ ತಜ್ಞರಲ್ಲೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ಬಗ್ಗೆ ಉದಾಸೀನ ಸಲ್ಲದು.

ಅಜೀರ್ಣ, ವಾಂತಿ

ಹೀಗೆನ್ನುತ್ತಿದ್ದಂತೆ ನಿನ್ನೆ ತಿಂದದ್ದು ಯಾವುದೋ ಸರಿಯಾಗಲಿಲ್ಲ ಎಂದೇ ಭಾವಿಸಿ, ಅದಕ್ಕೆ ಔಷಧಿ ಮಾಡುತ್ತೇವೆ. ಅದಿಲ್ಲದಿದ್ದರೆ, ಆಸಿಡಿಟಿ ತೊಂದರೆಯಿದ್ದರೆ ಸಹ ಇಂಥದ್ದೇ ಲಕ್ಷಣಗಳು ಕಾಣಬಹುದು. ಆದರೆ ಇವೆಲ್ಲ ಹುಳಿತೇಗು, ಎದೆಯುರಿಯ ಪ್ರಕೋಪಗಳು ಎಂದು ಸುಮ್ಮನಿರಬೇಡಿ. ರಕ್ತಸಂಚಾರ ಕಡಿಮೆ ಆದಾಗಲೂ ಇಂಥ ಸೂಚನೆಗಳು ಕಾಣುತ್ತವೆ.

ಬೆವರು

ಸೆಕೆಯಲ್ಲಿ ಬೆವರುವುದು ಸಹಜ. ಮಹಿಳೆಯರಿಗೆ ಋತುಬಂಧದ ಕಾಲದಲ್ಲಿ ವಿಪರೀತ ಬೆವರುವುದೂ ಸ್ವಾಭಾವಿಕ. ಆದರೆ ಕಾಲ ಯಾವುದೇ ಆದರೂ ಬೆವರುತ್ತಿದ್ದೀರಿ ಎಂದಾದರೆ ವೈದ್ಯರಲ್ಲಿಗೆ ಹೋಗಬೇಕು ಎಂದೇ ಅರ್ಥ. ದೇಹಕ್ಕೆ ಅಪಾಯವಾದಾಗ ಫ್ಲೈಟ್‌-ಫೈಟ್‌ ಹಂತಕ್ಕೆ ದೇಹ ತನ್ನನ್ನು ತಾನು ದೂಡಿಕೊಳ್ಳುವ ಸೂಚನೆಯಾಗಿ ಈ ಅತಿಯಾದ ಬೆವರು ಕಾಣುತ್ತದೆ.

ಉಸಿರುಗಟ್ಟುವುದು

ಸಣ್ಣ-ಪುಟ್ಟ ಕೆಲಸ ಮಾಡುವಾಗ, ಮೆಟ್ಟುಲು ಹತ್ತುವಾಗ, ಎಷ್ಟೋ ವರ್ಷಗಳಿಂದ ಮಾಡುತ್ತಿರುವ ಮಾಮೂಲಿ ವಾಕಿಂಗ್‌ನಲ್ಲೂ ಮೇಲುಸಿರು ಬರುತ್ತಿದೆ ಎಂದಾದರೆ ಮುಂಬರುವ ಅಪಾಯದ ಸೂಚನೆಯಿದು. ಅಂದರೆ ಹೃದಯಾಘಾತ ಆಗಿಯೇ ಬಿಡುತ್ತದೆ ಎಂದಲ್ಲ, ಆದರೆ ಹೃದಯದ ಆರೋಗ್ಯ ಚೆನ್ನಾಗಿಲ್ಲ ಎಂಬುದು ಸ್ಪಷ್ಟ.

ನೋವು

ಹೀಗೆನ್ನುತ್ತಿದ್ದಂತೆ ಎದೆನೋವೇ ಬರಬೇಕೆಂದಿಲ್ಲ. ಬೆನ್ನು, ಭುಜ, ತೋಳು, ಕುತ್ತಿಗೆ, ದವಡೆಯಲ್ಲೂ ನೋವು ಕಾಣುತ್ತಿದೆ ಎಂದಾದರೆ ಖಂಡಿತಕ್ಕೂ ಏನೋ ಸರಿಯಿಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ಸಾರಿ ರಕ್ತನಾಳಗಳಲ್ಲಿ ಜಮೆಯಾಗಿರುವ ಕೊಬ್ಬಿನಿಂದಾಗಿ ಪರಿಚಲನೆಯಲ್ಲಿ ತೊಂದರೆಯಾಗಿ ಬರುವಂಥ ತೊಂದರೆಗಳಿವು. ವೇಗಸ್‌ ನರವು ಹೃದಯದಿಂದ ಮೆದುಳು, ಎದೆ, ಕುತ್ತಿಗೆ, ಕಿಬ್ಬೊಟ್ಟೆ ಮುಂತಾದ ಹಲವೆಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಹೃದಯದಲ್ಲಿ ಆಗುವಂಥ ತೊಂದರೆಗಳನ್ನು ಇತರ ಭಾಗಗಳಿಗೆ ನೋವಿನ ಮೂಲಕ ಸೂಚನೆ ನೀಡುತ್ತದೆ.

Related Articles

Back to top button