ಧಾರ್ಮಿಕ

ಹಾಲಿಗೆ ಹಾಲಾಹಲ ಬೆರೆಸಿ ಕಲ್ಲಾದರು

Views: 0

ಬಸ್ರೂರು ಗುಪ್ಪಿಯ ಸದಾನಂದ ಯತಿಗಳಿಗೆ ಇಬ್ಬರು ದೇವದಾಸಿಯರು ನಿತ್ಯವೂ ಶುದ್ಧ ಹಸುವಿನ ನೊರೆಹಾಲನ್ನು ತಂದು ಕೊಡುತ್ತಿದ್ದರು. ಸದಾನಂದ ಯತಿಗಳ ಮೇಲೆ ಅವರಿಗೆ ತುಂಬಾ ಭಕ್ತಿ ಮತ್ತು ಪ್ರೀತಿ. ಯತಿಗಳ ಮಹಿಮೆ ಮತ್ತು ಅವರ ದೊಡ್ಡತನವನ್ನು ಅವರು ಮನಸಾರೆ ಮೆಚ್ಚಿದ್ದರು. ಅವರ ಹಿರಿಮೆಗೆ ಮಾರುಹೋಗಿದ್ದರು. ಆದರೆ ಕಾಲ ನಿಂತ ನೀರಲ್ಲ. ಕಾಲಕ್ಕೆ ತಕ್ಕಂತೆ ಎಲ್ಲಾ ರಂಗಗಳಲ್ಲೂ ಬದಲಾವಣೆಗಳು ಆಗುತ್ತಿರುತ್ತವೆ. ಅಂತಹ ಬದಲಾವಣೆಗಳನ್ನು ಮುಂದಾಗಿ ಯಾರೂ ಊಹಿಸಲು ಸಾಧ್ಯವಿಲ್ಲ. ಮನುಷ್ಯನ ಮನೋಭಾವನೆಗಳೂ ಇದಕ್ಕೆ ಹೊರತಲ್ಲ. ಇದ್ದಕ್ಕಿದ್ದ ಹಾಗೆ ಆ ದೇವದಾಸಿಯರಿಗೆ ಯತಿಗಳ ಸತ್ತ್ವಪರೀಕ್ಷೆ ಮಾಡುವ ಹಂಬಲ ಅಂಕುರಿಸಿತು.

ಅಂದು ಆ ದೇವದಾಸಿಯರು ತಂಬಿಗೆಯಲ್ಲಿರುವ ಹಾಲಿಗೆ ಭಯಂಕರ ವಿಷವನ್ನು ಬೆರೆಸಿ ಯತಿಗಳ ಬಳಿಗೆ ತಂದರು. ಯತಿಗಳ ಪ್ರಾಣಹಾನಿ ಮಾಡುವ ಉದ್ಧೇಶ ಅವರಿಗಿರಲಿಲ್ಲ. ಯತಿಗಳು ನಿಜವಾಗಿಯೂ ಮಹಿಮಾನ್ವಿತರಾದರೆ ಅವರಿಗದು ತಿಳಿದೇ ತಿಳಿಯುತ್ತದೆ. ಒಂದು ವೇಳೆ ಅವರಿಗೆ ತಿಳಿಯದೇ ಹೋದಲ್ಲಿ ಅವರು ಅದನ್ನು ಕುಡಿಯದಂತೆ ತಡೆಯಬಹುದು ಎನ್ನುವುದು ಅವರ ದೂರಾಲೋಚನೆ. ಆದರೆ ಯಥಾರ್ಥವಾಗಿ ದುರಾಲೋಚನೆಯಿಂದ ದುಷ್ಕೃತ್ಯಕ್ಕೆ ಇಳಿದಿದ್ದ ದೇವದಾಸಿಯರು ಎಂದಿನಂತೆ ಸಹಜವಾಗಿರಲು ಸಾಧ್ಯವಾಗಿರಲಿಲ್ಲ. ಅವರು ಸಣ್ಣಗೆ ಕಂಪಿಸುತ್ತಿದ್ದರು. ಸದಾನಂದ ಯತಿಗಳಿಗೆ ಇವರು ಹೀಗೇಕೆ?  ಎಂದು ಆಶ್ಚರ್ಯವಾಯಿತು. ನಿಜವಾಗಿ ಏನು ನಡೆಯುತ್ತಿದೆ ಎಂಬುದು ಅವರ ದಿವ್ಯದೃಷ್ಟಿಗೆ ಗೋಚರವಾಯಿತು. ಸಹಜವಾಗಿ ಬಂದ ಕೋಪದಿಂದ ಯತಿಗಳು, “ಇಂತಹ ಕಲ್ಲುಹೃದಯದ ಕೃತ್ಯ ಮಾಡಹೊರಟ ನೀವು ನಿಜವಾದ ಕಲ್ಲಾಗಿ ಬಿದ್ದಿರಿ” ಎಂದು ಆ ದೇವದಾಸಿಯರನ್ನು ಶಪಿಸಿ ಬಿಟ್ಟರು. ಆಗ ಆ ದೇವದಾಸಿಯರಿಗೆ ಜ್ಞಾನೋದಯವಾಯಿತು. ತಮ್ಮ ತಪ್ಪಿನ ಅರಿವಾಗಿ, ಯತಿಗಳಿಗೆ ಶರಣಾಗಿ ತಾವು ಮಾಡಿದ ತಪ್ಪನ್ನು ಕ್ಷಮಿಸಿ ಕರುಣೆಯಿಂದ ಕಾಪಾಡಬೇಕೆಂದು ಬೇಡಿಕೊಂಡರು.

“ತರುಣಿಯರು ಬೆದರುತ್ತ ಗಡಗಡನೆ ನಡುಗುತ್ತ
ಚರಣಕೆರಗುತ ಮರುಗಿ ನಿಜ ನಾವು ತಪ್ಪಿದೆವು
ಗುರು ನೀನೆ ನಮ್ಮ ಕ್ಷಮಿಸುತ ರಕ್ಷಿಸುವುದಯ್ಯ ಎಂದೆನುತ ಬೇಡುತಿರಲು I
ತರಳೆಯರೆ ಆರೇನ ಮಾಡಲಾಗುವುದವ್ವ
ಉರು ಕ್ರೋಧದಿಂದ ಶಪಿಸಿದೆನೀಗ ನಾನೇನ
ನರಿಯೆ ಮುಂದೀ ಶಾಪದಿಂ ವಿಮೋಚನೆಗೊಂಬ ಕಾಲವನು ನಿಮಗೆ ಪೇಳ್ವೆ II”

“ತಿಳಿದೋ ತಿಳಿಯದೆಯೋ ನೀವು ಮಾಡಿದ ತಪ್ಪಿನಿಂದಾಗಿ ನಾನು ನಿಮಗೆ ಶಾಪ ನೀಡಬೇಕಾಯಿತು. ಇದು ದೈವೇಚ್ಛೆ. ಆದರೆ ಒಮ್ಮೆ ಕೊಟ್ಟ ಶಾಪವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಮಾತ್ರ ನನ್ನಿಂದ ಸಾಧ್ಯವಿಲ್ಲ. ನೀವು ಈ ಶಾಪವನ್ನು ಅನುಭವಿಸಲೇ ಬೇಕು. ಆದರೆ ನಿಮ್ಮ ಶಾಪ ಯಾವಾಗ ವಿಮೋಚನೆ ಹೊಂದುತ್ತದೆ ಎಂಬುದನ್ನು ಮಾತ್ರ ಹೇಳಬಲ್ಲೆ” ಎನ್ನುತ್ತಾರೆ ಯತಿಗಳು.

“ಕೆಸು ಗಿಡದ ಎಲೆ ಕವಲು ಕೂಡಲು
ಅಸಮ ಆಳದ ಮಂಡಿಬಾಗಿಲೊ
ಳೆಸೆಯೆ ಕಾಲ್ದಾರಿ ಗಡ, ಜಾಗಟೆ ಶಂಖವೂದುತಲಿ I
ವಸುಪುರೇಶನ ಪೂಜೆಗೈಯಲು
ಕುಸುಮಲೋಚನೆಯರಿರ ತವ ದು
ರ್ದೆಸೆಯು ಸರಿವುದು ಎನುತ ಮನದಲಿ ಯೋಚಿಸಿದರಿಂತು II”

“ಕೆಸುವಿನ ಎಲೆಯ ಬುಡಭಾಗದಲ್ಲಿರುವ ಕವಲು ಮಾಯವಾದಾಗ, ತುಂಬಾ ಆಳವಾಗಿರುವ ಮಂಡಿಬಾಗಿಲಿನಲ್ಲಿ (ಇಲ್ಲಿ ಹರಿಯುವ ವಾರಾಹಿ ನದಿಯ ಕಳುವಿನ ಬಾಗಿಲು ಇದೆ – ಹಟ್ಟಿಕುದ್ರು ದ್ವೀಪಕ್ಕೆ ಸಂಪರ್ಕ ಇಲ್ಲಿಂದ.) ಕಾಲು ದಾರಿಯಾದಾಗ, ಶಂಖಜಾಗಟೆ ನಾದಗಳೊಂದಿಗೆ ಬಸ್ರೂರು ಮಹಾಲಿಂಗೇಶ್ವರನ ಪೂಜೆ ಮಾಡುವ ಕಾಲ ಬಂದಾಗ ನಿಮ್ಮ ಶಾಪ ವಿಮೋಚನೆಯಾಗುತ್ತದೆ” ಎಂದು ಯತಿಗಳು ಹೇಳುತ್ತಾರೆ. ವಾಸ್ತವವನ್ನು ಅರಿತ ಯತಿಗಳು ಈ ರೀತಿ ಯೋಚನೆ ಮಾಡುತ್ತಾರೆ: “ಹೀಗೆಲ್ಲಾ ಆಗಲು ಕಾಲಗತಿಯೇ ಕಾರಣ. ಈಗ ಕಲಿಯುಗದ ಪ್ರವೇಶವಾಗಿದೆ. ಇನ್ನು ಮುಂದೆ ದುಷ್ಟ ಪ್ರವೃತ್ತಿಗಳೇ ಮುಂಚೂಣಿಯಲ್ಲಿರುತ್ತವೆ. ಹಾಗಾಗಿ ನಾನು ಈ ಪ್ರಪಂಚದಲ್ಲಿ ಇನ್ನೂ ಇರುವುದು ಸರಿಯಲ್ಲ”.

 

“ಇಂತಾ ಯತಿವರ ಶಿವನನು
ಮಂತ್ರಗಳಿಂದ ಪೊಗಳುತ್ತ ಮೇಣ್ ಮಾನಸದೊಳ್ I
ಸಂತಸಗೊಳ್ಳುತಲಾ ವರ
ಸಂತರು ತತ್ ಕ್ಷಣದಿ ಭೂಮಿಗರ್ಭವ ಪೊಕ್ಕರ್ II”

             ಜನರ ಬಾಯಿಂದ ಬಾಯಿಗೆ ಬಂದ ಮೇಲಿನ ಕಥೆಯನ್ನು 1960ರ ದಶಕದಲ್ಲಿ ಅಂದಿನ ಬಸ್ರೂರು ಹೈಸ್ಕೂಲಿನಲ್ಲಿ ನಮ್ಮ ಕನ್ನಡ ಪಂಡಿತರಾಗಿದ್ದ ಶ್ರೀ ಕೆ. ಎಸ್. ಹತ್ವಾರ್ ಅವರು ತಮ್ಮ ಲೇಖನವೊಂದರಲ್ಲಿ ದಾಖಲಿಸಿದ್ದರು. ಮಂಡಿಬಾಗಿಲಿನಲ್ಲಿ ವಾರಾಹಿಯ ಒಡಲು ಒಣಗಿ ಕಾಲ್ದಾರಿಯಾಗುವ ಸಾಧ್ಯತೆ ಸಧ್ಯಕ್ಕಂತೂ ಕಾಣಿಸುತ್ತಿಲ್ಲ. ಅದೇ ಸ್ಥಳದಲ್ಲಿ ಈಗ ಸೇತುವೆ ನಿರ್ಮಾಣ ಆಗಿದೆಯಾದರೂ, ಅದನ್ನು ಕಾಲುದಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ದೇವದಾಸಿಯರ ಶಾಪ ವಿಮೋಚನೆಯನ್ನು ಕಾಣುವ ಯೋಗ ಸಧ್ಯಕ್ಕಂತೂ ನಮಗೆ ಲಭ್ಯವಿಲ್ಲ.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಸುಮಾರು ಅರ್ಧ ಕಿಲೋಮೀಟರ್ ದಕ್ಷಿಣಕ್ಕೆ ಇರುವುದು ಗುಪ್ಪಿ ಹಾಡಿ. ಆ ಕಾಲದಲ್ಲಿ ನಾವು ಉಳ್ಳೂರಿನಿಂದ ಬಸ್ರೂರು ಶಾಲೆಗೆ ಹೋಗುವಾಗ (ಸುಮಾರು 60- 65 ವರ್ಷಗಳ ಹಿಂದೆ) ಗುಪ್ಪಿ ಹಾಡಿ ಮಾರ್ಗವಾಗಿಯೇ ಹೋಗಬೇಕಾಗಿತ್ತು. ಆಗ ಅಲ್ಲಿ ರಸ್ತೆ ಇರಲಿಲ್ಲ. ಕಾಲುದಾರಿ ಮಾತ್ರ ಇತ್ತು. ನಮ್ಮ ಕಾಲು ದಾರಿಯ ಪಕ್ಕದಲ್ಲೇ ಒಂದು ಹಾಳುಬಿದ್ದ ದೇವಸ್ಥಾನದ ಅವಶೇಷಗಳು ಕಾಣಿಸುತ್ತಿದ್ದವು. ಹಿರಿಯರು ಅದನ್ನು “ಗುಪ್ಪಿ ಸದಾನಂದ ದೇವಸ್ಥಾನ” ಎಂದು ನಮಗೆ ಹೇಳುತ್ತಿದ್ದರು. ಪೂರ್ತಿ ಹಾಳುಬಿದ್ದ ದೇವಸ್ಥಾನದ ಪಂಚಾಂಗ ಮತ್ತು ಕಲ್ಲಿನ ಕಂಬಗಳು ಮಾತ್ರ ಅಲ್ಲಿ ಬಿದ್ದಿದ್ದವು. ಅವಶೇಷಗಳೆಲ್ಲವೂ ಮುಳ್ಳು ಮರಗಿಡಗಳಿಂದ ಮುಚ್ಚಿ ಹೋಗಿದ್ದವು. ದೇವಸ್ಥಾನದ ಮೆಟ್ಟಿಲುಗಳ ಇದಿರುಗಡೆ ಮನುಷ್ಯಾಕೃತಿಯ ಎರಡು ಕಲ್ಲುಗಳು ಅಡ್ಡ ಬಿದ್ದಿರುವುದನ್ನೂ ನಾವು ನೋಡುತ್ತಿದ್ದೆವು (ನಮಗೆ ಹಾಗೆ ಕಾಣಿಸುತ್ತಿತ್ತು).

ಉತ್ಸಾಹೀ ತರುಣರ ತಂಡವೊಂದು 2020ರಲ್ಲಿ ನಡೆಸಿದ ಸ್ವಚ್ಚತಾ ಆಂದೋಲನದಿಂದ ಗುಪ್ಪಿ ದೇವಸ್ಥಾನದ ಆವರಣ ಈಗ ಹೊಸಹುಟ್ಟು ಪಡೆದು, ಪ್ರವಾಸಿಗರ ಕಣ್ಣು ತಣಿಸುತ್ತಿರುವುದಂತೂ ಸತ್ಯ.

– ನಾರಾಯಣ ಶೆಟ್ಟಿಗಾರ್, ಬೆಂಗಳೂರು
           ಮೊ. 9845660131

Related Articles

Back to top button
error: Content is protected !!