ಹಳೇ ವಾಹನಕ್ಕೆ HSRP ಕಡ್ಡಾಯ: ಸುಳ್ಳು ವದಂತಿಗೆ ಸಾರಿಗೆ ಇಲಾಖೆ ಸ್ಪಷ್ಟನೆ
Views: 88
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ 2019 ಏಪ್ರಿಲ್ 1ರ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
1 ಏಪ್ರಿಲ್ 2019ಕ್ಕಿಂತ ಹಿಂದೆ ರಿಜಿಸ್ಟ್ರೇಷನ್ ಆಗಿರುವ ಎಲ್ಲಾ ವಾಹನಗಳಿಗೂ ವಾಹನ ಮಾಲೀಕರು ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಅಳವಡಿಸಿಕೊಳ್ಳಬೇಕಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಲ್ಲ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿತ್ತು. ಇದೀಗ ಅದೆಲ್ಲದಕ್ಕೂ ಸ್ಪಷ್ಟನೆ ನೀಡುವ ಮೂಲಕ ರಾಜ್ಯ ಸಾರಿಗೆ ಇಲಾಖೆ ತೆರೆ ಎಳೆದಿದೆ.
ಸಾರಿಗೆ ಇಲಾಖೆಯ ಪ್ರಕಾರ, 01 ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ. ರಾಜ್ಯದ ಎಲ್ಲಾ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳಿಗೆ ತಕ್ಷಣವೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
ಪ್ರಕಟಣೆಯಲ್ಲಿ ಏನಿದೆ?
ಕೇಂದ್ರ ಸರಕಾರವು 1989ರ ಕೇಂದ್ರ ಮೋಟಾರು ವಾಹನ ನಿಯಮಗಳ 50ನೇ ವಿಧಿಯ ಅನ್ವಯ, 01 ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಎಚ್ ಅಳವಡಿಕೆ ಕಡ್ಡಾಯ ವಾಗಿದೆ. ಈ ನಿಯಮವು 2018ರಲ್ಲಿ ಜಾರಿಗೊಂಡಿದ್ದು, ರಾಜ್ಯದಲ್ಲಿಯೂ ಈ ನಿಯಮ ಅನ್ವಯವಾಗುತ್ತಿದೆ. ರಾಜ್ಯ ಸಾರಿಗೆ ಇಲಾಖೆ 2023ರಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ, 2019ರ ಏಪ್ರಿಲ್ 1ರ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಾಲಯವು ಸರಕಾರಕ್ಕೆ ಕ್ರಮ ಕೈಗೊಳ್ಳಲು ಅವಕಾಶ ನೀಡಿದ್ದು, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ನಿರ್ಧಾರವನ್ನು ಅನುಸರಿಸುವಂತೆ ಸೂಚಿಸಿತ್ತು. ಇದೇ ಸಂದರ್ಭದಲ್ಲಿ, ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.






