ಹಳಿಯ ಮೇಲೆ ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಗಂಡ, ಹೆಂಡತಿ,ಮಗು ಸಾವು

Views: 171
ಹಳಿಯ ಮೇಲೆ ಕುಟುಂಬವೊಂದು ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಪತಿ, ಪತ್ನಿ ಹಾಗೂ 3 ವರ್ಷದ ಮಗು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಲಾಹರ್‌ಪುರ ಮೊಹಲ್ಲಾ ನಿವಾಸಿಗಳಾದ ಮೊಹಮ್ಮದ್ ಅಹ್ಮದ್ (26), ಪತ್ನಿ ಆಯೇಷಾ (24) ಮತ್ತು 3 ವರ್ಷದ ಮಗ ಅಬ್ದುಲ್ಲಾ ಪ್ರಾಣ ಕಳೆದುಕೊಂಡವರು.
ಇಲ್ಲಿನ ಲಖೀಂಪುರ ಖೇರಿಯ ಆಯಿಲ್ ರೈಲ್ವೇ ಕ್ರಾಸಿಂಗ್‌ನಲ್ಲಿ ದಂಪತಿ ಅವರ 3 ವರ್ಷದ ಮಗುವಿನ ಜೊತೆ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಮೂವರನ್ನು ಡಿಕ್ಕಿ ಹೊಡೆದಿದೆ. ಇದರಿಂದ ಮೂವರ ದೇಹಗಳು ಛಿದ್ರವಾಗಿವೆ. ಇದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಒಂದೇ ಕುಟುಂಬದ ಮೂವರು ಬಹಳ ಹೊತ್ತಿನಿಂದ ರೈಲು ಹಳಿಯ ಮೇಲೆ ರೀಲ್ಸ್ ಮಾಡುತ್ತಿದ್ದರು. ರೈಲು ಬರುವುದನ್ನು ಗಮನಿಸದ ಕಾರಣ, ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮೃತರು ಸೀತಾಪುರದ ಲಾಹರ್‌ಪುರ ನಿವಾಸಿಗಳಾಗಿದ್ದು, ಮೂವರ ಸಾವಿನಿಂದ ಕುಟುಂಬಸ್ಥರು ರೋದಿಸುತ್ತಿದ್ದಾರೆ.
ಘಟನೆಯ ಕುರಿತು ಮಾಹಿತಿ ನಿಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪವನ್ ಕುಮಾರ್ ಗೌತಮ್, ಹಳಿಯ ಮೇಲೆ ರೀಲ್ಸ್ ಮಾಡುತ್ತಿದ್ದಾಗ, ರೈಲು ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.






