ಹಲ್ಲೆ ನಡೆಸಿ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಲು ಯತ್ನಿಸಿದಾಗ ಗುಂಡಿಕ್ಕಿ ದರೋಡೆಕೋರರಿಬ್ಬರ ಸೆರೆ

Views: 61
ಕನ್ನಡ ಕರಾವಳಿ ಸುದ್ದಿ,: ಹುಬ್ಬಳ್ಳಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ, ಇಬ್ಬರು ದರೋಡೆಕೋರರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟಿನಿಂದ ಗಾಯಗೊಂಡ ದರೋಡೆಕೋರರನ್ನು ನಗರದ ಕಿಮ್ಸ್‌ಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡೇಟು ತಿಂದು ಗಾಯಗೊಂಡ ದರೋಡೆಕೋರರ ತಂಡದ ಹಿನ್ನೆಲೆ ರೋಚಕವಾಗಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅದರ ವಿವರಗಳನ್ನು ಸುದ್ದಿಗಾರರೆದುರು ವಿವರಿಸಿದರು.
10 ರಿಂದ 20 ಜನರಿದ್ದ ಈ ದರೋಡೆಕೋರರ ತಂಡ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಗೆ ಬೇಕಾದ ನಟೋರಿಯಸ್ ತಂಡವಾಗಿದೆಯೆನ್ನಲಾಗಿದ್ದು, ದೆಹಲಿ, ಉತ್ತರ ಪ್ರದೇಶಗಳಲ್ಲೂ ಸಕ್ರಿಯವಾಗಿತ್ತು.
ಇದೇ ತಿಂಗಳು ಮಹಾನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಸುಮಾರು 20 ಲಕ್ಷರೂ. ಮೌಲ್ಯದ ವಸ್ತುಗಳ ಕಳ್ಳತನವಾಗಿದ್ದು, ಹಿಂದೆ ವಿದ್ಯಾಗಿರಿ, ಧಾರವಾಡ ಶಹರ, ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ಮಾದರಿ ಪ್ರಕರಣಗಳು ನಡೆದಿದ್ದವು.
ಈ ತಂಡದ ದರೋಡೆಕೋರರನ್ನು ಟ್ರ್ಯಾಕ್ ಮಾಡಿದಾಗ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಲಭ್ಯವಾಗಿದೆ.
ರಾಯನಾಳದ ಸಮೀಪದಲ್ಲಿ ದರೋಡೆಗಾಗಿ ಹೊಂಚು ಹಾಕಿ ಕುಳಿತಿದ್ದುದು ತಿಳಿದು ಬಂದಿದೆ. ತಂಡದ ಮೇಲೆ ದಾಳಿ ನಡೆಸಿ ಹಿಡಿಯಲೆತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ದರೋಡೆಕೋರರು ಹಲ್ಲೆ ನಡೆಸಿ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಲು ಯತ್ನಿಸಿದಾಗ ಮೊದಲು ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಸದ್ಯ ಬಂಧಿತ ದರೋಡೆಕೋರರು ಹಾಗೂ ಅವರ ತಂಡದ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ಘಟನೆಯಲ್ಲಿ ಗಾಯಗೊಂಡ ಪಿಎಸ್‌ಐ ದೇವೇಂದ್ರ ಮಾವಿನದಂಡಿ, ಸಿಬ್ಬಂದಿ ದ್ಯಾನೇಶ್, ಆನಂದ ಜಾವೂರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.