ಸಿದ್ದರಾಮಯ್ಯ ಮನೆ ಮುಂದೆ ಅಭಿಮಾನಿಗಳು, ಬೆಂಬಲಿಗರಿಂದ ಹೈಕಮಾಂಡ್ ನಿರ್ಧಾರದ ವಿರುದ್ಧ ಆಕ್ರೋಶ
Views: 87
ಕನ್ನಡ ಕರಾವಳಿ ಸುದ್ದಿ:ಕೊನೆಯವರೆಗೂ ಸಿದ್ದರಾಮಯ್ಯ ಅವರ ಪರವಾಗಿಯೇ ಇದ್ದ ರಾಹುಲ್ ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿಯ ನಂತರ ತಮ್ಮ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ.
ಮೊದಲಿನಿಂದಲೂ ನಾಯಕತ್ವ ಬದಲಾವಣೆಗಾಗಿ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್, ಈ ಬಾರಿ ಪ್ರಿಯಾಂಕಾ ಗಾಂಧಿ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರ ಸಂಘಟಿತ ಸಲಹೆಗೆ ರಾಹುಲ್ ಗಾಂಧಿ ಮಣಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಅವರ ಬೆಂಬಲಿಗರು, ಅಭಿಮಾನಿಗಳು, ಅಹಿಂದ ನಾಯಕರು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಬಳಿ ಜಮಾವಣೆಗೊಂಡಿರುವ ಬೆಂಬಲಿಗರು, ಅಭಿಮಾನಿಗಳು ಹೈಕಮಾಂಡ್ ನಿರ್ಧಾರದ ವಿರುದ್ಧ ಪ್ರತಿಭಟಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ ಎಂದು ಬೆಂಬಲಿಗರು ಗುಡುಗಿದ್ದಾರೆ. ಹಿಂದೆ ಸಿದ್ದರಾಮಯ್ಯ ಜೆಡಿಎಸ್ ತೊರೆದ ನಂತರ ಆ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಗಲೂ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಆ ಬಳಿಕ ಬಿಜೆಪಿ ಸ್ಥಿತಿ ಏನಾಗಿದೆ ಎಂಬುದು ಇಡೀ ರಾಜ್ಯದ ಜನತೆ ನೋಡುತ್ತಿದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಓರ್ವ ಮಾಸ್ ಲೀಡರ್. ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ರಾಜೀನಾಮೆ ಪಡೆದರೆ ಕಾಂಗ್ರೆಸ್ ಪಕ್ಷಕ್ಕೂ ಅದೇ ಗತಿ ಬರುತ್ತದೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಮೂರು ರಾಜ್ಯದಲ್ಲಿ ಮಾತ್ರ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗಟ್ಟಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ಹೀನಾಯ ಸ್ಥಿತಿ ತಲುಪುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದೇ ಸಿದ್ದರಾಮಯ್ಯರಿಂದ, ಒಂದು ವೇಳೆ ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೆ, 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದಿದ್ದಾರೆ. ಸಿಂ ನಿವಾಸದ ಬಳಿ ಹೈಕಮಾಂಡ್ ನಾಯಕರ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರ ಆಕ್ರೋಶ ಭುಗಿಲೇಳುತ್ತಿದ್ದಂತೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಆಪ್ತರಿಗೆ ಸೂಕ್ತ ಸ್ಥಾನಮಾನ:
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ, ತಮ್ಮ ಅವರಿಗೆ ಆಯಕಟ್ಟಿನ ಸ್ಥಾನ ಕೊಡಿಸುವುದಕ್ಕೆ ಸಿದ್ದ ರಾಮಯ್ಯ ತೀರ್ಮಾನಿಸಿದ್ದು, ಹೈಕಮಾಂಡ್ ಮುಂದೆಯೂ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಗೌರವಯುತವಾಗಿ ಇಳಿಸುವ ಆಲೋಚನೆಯಲ್ಲಿರುವ ಪಕ್ಷದ ಹೈಕಮಾಂಡ್ ಸಹ ಸಿದ್ದರಾಮಯ್ಯ ಹೇಳಿದವರಿಗೆ ಪ್ರಮುಖ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ.
ಹಿರಿಯ ಸಚಿವರನ್ನು ಕೈಬಿಡುವ ಸಾಧ್ಯತೆ:
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸ್ವೀಕರಿಸುವ ಮೊದಲೇ ಸಂಪುಟ ತಲೆಬಿಸಿ ಶುರುವಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಚುನಾವಣೆಗೆ ಎರಡು ವರ್ಷವಿರುವುದರಿಂದ, ಸರಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ, ಪಕ್ಷದ ಸಂಘಟನೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ. ಆದ್ದರಿಂದ ಈ ಬಾರಿ ಕೆಲ ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಆಲೋಚನೆಯಲ್ಲಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೂ, ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಸಂಪುಟದಲ್ಲಿ ಜಾಗ ಸಿಗುವಂತೆ ನೋಡಿಕೊಳ್ಳುವುದು ಬಹುತೇಕ ನಿಶ್ಚಿತವಾಗಿರುವುದರಿಂದ ಈ ಸವಾಲನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲವಿದೆ.
ಡಿಸಿಎಂ ಸ್ಥಾನಕ್ಕೆ ಒಬ್ಬೊಬ್ಬರು ಒಂದೊಂದು ಕ್ಷೇಮು:
ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಬಿಟ್ಟು ಇನ್ಯಾರು ಡಿಸಿಎಂ ಆಗುವಂತಿಲ್ಲ ಎನ್ನುವ ಷರತ್ತು ವಿಧಿಸಿದ್ದರು. ಆದರೀಗ ಅನಿವಾರ್ಯವಾಗಿ ಡಿಸಿಎಂ ಸ್ಥಾನ ಸೃಷ್ಟಿಸಲು ಒಪ್ಪಿಗೆ ಸೂಚಿಸಬೇಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾನು ಮುಖ್ಯಮಂತ್ರಿಯಾಗಲಿಲ್ಲ. ನನ್ನ ಮಗನನ್ನು ಉಪ ಮುಖ್ಯಮಂತ್ರಿ ಮಾಡಿ ಎಂದಿದ್ದಾರೆ.
ಯತೀಂದ್ರಗೆ ಡಿಸಿಎಂ: ಸಿಗದ ಸಿದ್ದು ಒಪ್ಪಿಗೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಒಬಿಸಿ ಕೋಟಾದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಫರ್ ಅನ್ನು ಕೆ.ಸಿ. ವೇಣುಗೋಪಾಲ್ ಕಡೆಯಿಂದ ಪಕ್ಷದ ವರಿಷ್ಠರು ನೀಡಿದ್ದಾರೆ. ಅದರೆ ತಾವು ಮುಖ್ಯಮಂತ್ರಿಯಿಂದ ಕೆಳಗಿಳಿಯುವ ಸಮಯದಲ್ಲಿ ಪುತ್ರನಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿಸಿದರೆ ತಮ್ಮ ಸಮಾಜವಾದಿ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಡಿಸಿಎಂ ಸ್ಥಾನ ಬೇಡ. ಬದಲಿಗೆ ಸಚಿವರನ್ನಾಗಿ ಮಾಡಿ, ಪ್ರಮುಖ ಖಾತೆ ನೀಡಿದರೆ ಸಾಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಆದ್ದರಿಂದ ಒಬಿಸಿ ಕೋಟಾದಲ್ಲಿ ಯತೀಂದ್ರ ಹೆಸರು ಓಡುತ್ತಿದ್ದರೂ, ಅದು ಅಂತಿಮವಾಗಿಲ್ಲ ಎನ್ನಲಾಗಿದೆ.






