ಆರೋಗ್ಯ

ಸಾಧನಾ ಮರವಂತೆ: ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ 

Views: 20

ಕನ್ನಡ ಕರಾವಳಿ ಸುದ್ದಿ: ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ನೇತ್ರ ಶಿಬಿರವನ್ನು ಡಾ.ಕೆ. ಗಣೇಶ ಭಟ್ಟ ಉದ್ಘಾಟಿಸಿ, ಮಾತನಾಡಿದರು.

ಕಣ್ಣಿನ ಆರೈಕೆಗೆ ವಿಶೇಷ ಗಮನ ಅಗತ್ಯ ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಅತಿ ಸೂಕ್ಷ್ಮವಾದದುದು ಮತ್ತು ಎಲ್ಲಕ್ಕಿಂತ ಮಹತ್ವವಾದುದು. ಅದರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಗಮನ ನೀಡಬೇಕು ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಗಣೇಶ ಭಟ್ಟ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿವಾರಣಾ ವಿಭಾಗ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಧನಾ ಸಮಾಜ ಸೇವಾ ವೇದಿಕೆ ಮತ್ತು ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಣ್ಣಿನ ಸೂಕ್ಷ್ಮ ಭಾಗಗಳು ವಿವಿಧ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾಗುವುದರಿಂದ ದೃಷ್ಟಿ ದೋಷ ಹಾಗೂ ದೃಷ್ಟಿ ನಾಶ ಸಂಭವಿಸಬಹುದು ಹಾಗಾಗುವುದನ್ನು ತಡೆಯಲು ಕಾಲಕಾಲಕ್ಕೆ ನೇತ್ರತಜ್ಞರಿಂದ ತಪಾಸಣೆ ಮಾಡಿಸಿಕೊಂಡು ಅವರು ಸೂಚಿಸುವ ಚಿಕಿತ್ಸೆ ಪಡೆಯಬೇಕು. ವಯೋಮಾನದ ಕಾರಣದಿಂದ ಮಸುಕಾಗುವ ದೃಷ್ಟಿಯನ್ನು ಸರಳ ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಟ್ರಸ್ಟ್ನ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ. ಮನೋಜ್ ಭಟ್ ಮತ್ತು ಆಡಳಿತಾಧಿಕಾರಿ ಯು. ಶಂಕರ ಶೆಟ್ಟಿ ತಮ್ಮ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆಗೆ ಸಂಬಂಧಿಸಿ ಸಿಗುವ ಉಚಿತ ಸೇವೆಗಳನ್ನು ವಿವರಿಸಿದರು. ಈ ಶಿಬಿರದಲ್ಲಿ ಪರೀಕ್ಷೆಗೆ ಒಳಗಾಗಿ ಕನ್ನಡಕ ಬಳಕೆಗೆ ಸೂಚಿಸಲ್ಪಟ್ಟವರಿಗೆ ಜಿಲ್ಲಾ ಪಂಚಾಯಿತಿ ಯೋಜನೆಯಡಿ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಡಾ. ಗಣೇಶ ಭಟ್ಟ ಪ್ರಕಟಿಸಿದರು.

ಸಾಧನಾ ಅಧ್ಯಕ್ಷ ಪುಟ್ಟ ಎಂ. ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಯೋಜಕ ನಾಗೇಶ್ ಎಸ್. ರಾವ್ ಸ್ವಾಗತಿಸಿದರು. ದೇವಿದಾಸ ಶ್ಯಾನುಭಾಗ್ ನಿರೂಪಿಸಿ, ವಂದಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ ಸಹಕರಿಸಿದರು.

ಶಿಬಿರದಲ್ಲಿ 165 ಜನರು ನೇತ್ರ ಪಾಸಣೆ ಮಾಡಿಸಿಕೊಂಡರು. ಅವರಲ್ಲಿ 60 ಮಂದಿಗೆ ಹೆಚ್ಚಿನ ತಪಾಸಣೆಗೆ ಮತ್ತು 18 ಜನರಿಗೆ ಪೊರೆ ಶಸ್ತ್ರ ಚಿಕಿತ್ಸೆಗೆ ಉಚಿತ ವಾಹನದಲ್ಲಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಯಿತು.

Related Articles

Back to top button