ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯ ಮಾಲಕರ ಮೇಲೆ ನಕಲಿ ವಿಮಾ ಪ್ರಕರಣದ ಬಗ್ಗೆ ಸ್ಪಷ್ಟನೆ ಮತ್ತು ಪತ್ರಿಕೆ ಪ್ರಕಟಣೆ

Views: 1008
ಕನ್ನಡ ಕರಾವಳಿ ಸುದ್ದಿ: ದಿನಾಂಕ 05/09/2025 ರಂದು ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು ಸಂಖ್ಯೆ: 158/25 ರಲ್ಲಿ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ಬಸ್ರೂರು ಇದರ ಮಾಲಕರ ಮೇಲೆ ನಕಲಿ ವಿಮಾ ಪಾಲಿಸಿ ಸೃಷ್ಟಿಸಿದ ಬಗ್ಗೆ ರಿಲಯನ್ಸ್ ವಿಮಾ ಕಂಪನಿ ಮ್ಯಾನೇಜರ್ ನಿಖಿಲ್ ಇವರು ಪ್ರಕರಣ ದಾಖಲಿಸಿರುತ್ತಾರೆ. ಪ್ರಕರಣದ ವಿವರದಂತೆ ದಿನಾಂಕ 25/11/2024ರಂದು KA 20AB 8968 ಶಾಲಾ ವಾಹನ ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಎಂಬ ಗ್ರಾಮದಲ್ಲಿ ಆಟೋ ರಿಕ್ಷಕ್ಕೆ ಮುಖಾಮುಖಿ ಡಿಕ್ಕಿ ಆಗಿರುತ್ತದೆ.
ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲೆಯಾಗಿರುತ್ತದೆ. ಪ್ರಕರಣದ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಬಳಿ ಇರುವ ವಾಹನದ ಎಲ್ಲಾ ದಾಖಲೆಗಳನ್ನು ಕೋಟ ಪೊಲೀಸ್ ಸ್ಟೇಷನ್ಗೆ ನೀಡಿ ಅಂದಿನ ಶಾಲಾ ಮುಖ್ಯ ಶಿಕ್ಷಕಿಯವರು ದಿನಾಂಕ: 28/11/2024 ರಂದು ವಾಹನವನ್ನು ಬಿಡಿಸಿಕೊಂಡು ಬಂದಿರುತ್ತಾರೆ.
ಈ ಸಂದರ್ಭದಲ್ಲಿ ಠಾಣೆಗೆ ನೀಡಿರುವ ವಿಮಾ ಪ್ರತಿಯನ್ನು ಯಥಾವತ್ತಾಗಿ ಠಾಣಾಧಿಕಾರಿಯವರು ನ್ಯಾಯಾಲಯಕ್ಕೆ ಹಾಜರಿಪಡಿಸಿರುತ್ತಾರೆ.
ನಂತರ ವಾಹನವನ್ನು ಸಂಸ್ಥೆಯ ಮಾಲಕರು ಉಡುಪಿ ಫೋರ್ಸ್ ಶೋರೂಂನಲ್ಲಿ ದುರಸ್ತಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿರುವ ಪಾಲಿಸಿ ನಕಲಿಯೆಂದು ತಿಳಿದುಬಂದಿರುತ್ತದೆ. ಇದನ್ನು ಗಮನಿಸಿದ ಸಂಸ್ಥೆಯ ಮಾಲೀಕರು ಕೂಡಲೇ ವಿಮಾ ಪಾಲಿಸಿ ಮಾಡಿಕೊಟ್ಟಿರುವ ಏಜೆಂಟ್ ಕುಂದಾಪುರದ ಟಾಟಾ ಶೋರೂಂ ಅರವಿಂದ್ ಮೋಟರ್ಸನ ಪ್ರತಿನಿಧಿ ರಾಕೇಶ್ ನನ್ನು ಸಂಪರ್ಕಿಸಿರುತ್ತಾರೆ. ಆತ ಆ ಕ್ಷಣದಲ್ಲಿ ನಕಲಿ ಎಂದು ತಪೊಪ್ಪಿಕೊಂಡು ದಿನಾಂಕ 29/11/2024 ರಂದು ಇನ್ನೊಂದು ಪಾಲಿಸಿಯನ್ನು ಮಾಡಿಕೊಟ್ಟಿರುತ್ತಾನೆ.
ಇದೇ ರೀತಿ ಶಾಲೆಯ ಇತರ ಮೂರು ವಾಹನಗಳಿಗೆ ನಕಲಿ ಪಾಲಿಸಿಯನ್ನು ಸಹ ಮಾಡಿ ಹಣ ತೆಗೆದುಕೊಂಡಿರುತ್ತಾನೆ. ಅದನ್ನು ಕೂಡ 29/11/2024 ರಂದು ಬದಲಾಯಿಸಿಕೊಟ್ಟಿರುತ್ತಾನೆ. ಈ ವಿಷಯವನ್ನು ಸಂಸ್ಥೆಯ ಮಾಲಕರು ದಿನಾಂಕ: 03 /01/ 2025 ರಂದು ಇ-ಮೇಲ್ ಮುಖಾಂತರ ರಿಲಯನ್ಸ್ ಇನ್ಸೂರೆನ್ಸ್ ಕಂಪನಿಯ ಗಮನಕ್ಕೆ ತಂದಿರುತ್ತಾರೆ.
ಇದಾದ ಬಳಿಕ ಅಪಘಾತ ನಡೆದ ಆಟೋ ರಿಕ್ಷ ಮಾಲಕನು ನ್ಯಾಯಾಲಯದಲ್ಲಿ ವಿಮಾ ಹಣಕ್ಕಾಗಿ ಪ್ರಕರಣ ಸಲ್ಲಿಸಿರುತ್ತಾನೆ. ನ್ಯಾಯಾಲಯದ ಪ್ರಕರಣದ ಮುಂದುವರಿದ ಭಾಗವಾಗಿ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯವರಿಗೆ ನಕಲಿ ಇನ್ಸೂರೆನ್ಸ್ ಪಾಲಿಸಿಯ ಬಗ್ಗೆ ಮಾಹಿತಿ ಇದ್ದು ಕೂಡ ದಿನಾಂಕ:05 /09 2025 ರಂದು ಸಂಸ್ಥೆಯ ಮಾಲೀಕರ ಮೇಲೆ ನಕಲಿ ವಿಮಾ ಪ್ರಕರಣದ ದೂರನ್ನು ನೀಡಿರುತ್ತಾರೆ.
ಪ್ರಕರಣದ ವಿಚಾರಣೆಗಾಗಿ ಕೋಟ ಪೊಲೀಸ್ ಠಾಣಾಧಿಕಾರಿಗಳು ಸಂಸ್ಥೆಯ ಮಾಲಕರನ್ನು ಬರ ಹೇಳಿರುತ್ತಾರೆ. ಮಾಲಕರ ಹತ್ತಿರ ಇರುವ ದಾಖಲೆಗಳನ್ನು ಪರಿಶೀಲನೆ ಮಾಡಿರುತ್ತಾರೆ.
ದಿನಾಂಕ:06 /09/ 2025 ರಂದು ಕುಂದಾಪುರದ ಅರವಿಂದ್ ಮೋಟರ್ಸ್ ಪ್ರತಿನಿಧಿ ರಾಕೇಶ್ ಎಂಬಾತ ನನ್ನು ವಿಚಾರಣೆ ಮಾಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ. ಇದರಲ್ಲಿ ಇನ್ನೊಬ್ಬ ವ್ಯಕ್ತಿಯಾದ ಚರಣ್ ಎಂಬವನು ಸೇರಿಕೊಂಡಿರುತ್ತಾನೆ. ಹಾಗೂ ಅವನ ವಿಚಾರಣೆಗಾಗಿ ಹುಡುಕಾಟದಲ್ಲಿ ನಿರತರಾಗಿರುತ್ತಾರೆ.
ಕೇವಲ ಪ್ರಕರಣ ದಾಖಲಾದ ಎರಡೇ ದಿನದಲ್ಲಿ ಒಬ್ಬ ನೈಜ ಆರೋಪಿಯನ್ನು ಬಂಧಿಸಿ ಇನ್ನೊಬ್ಬ ಆರೋಪಿಯನ್ನು ಬಂಧಿಸುವ ನಿಟ್ಟಿನಲ್ಲಿ ಇರುವ ಠಾಣಾಧಿಕಾರಿಗಳ ಕಾರ್ಯಕ್ಕೆ ಸಂಸ್ಥೆಯ ಮಾಲಕರು ತುಂಬು ಹೃದಯದ ಅಭಿನಂದನೆಯನ್ನು ತಿಳಿಸುತ್ತಿರುತ್ತಾರೆ.
ಹಾಗೂ ಆದಷ್ಟು ಬೇಗ ನೈಜ ಆರೋಪಿಯನ್ನು ಬಂಧಿಸಿ ನ್ಯಾಯ ಒದಗಿಸಿಕೊಡಬೇಕೆಂದು ಸಂಸ್ಥೆಯ ಪರವಾಗಿ ವಿನಮ್ರ ಮನವಿಯನ್ನು ಮಾಡಿ ಕೊಳ್ಳುತ್ತಿದ್ದಾರೆ.
ಸಂಸ್ಥೆಯ ಮೇಲೆ ವಿನಾಕಾರಣ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಷಡ್ಯಂತ್ರ ಮಾಡುತ್ತಾ ಬಂದಿರುವ ಕೆಲವು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಕೂಡ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಆ ವ್ಯಕ್ತಿ ಈ ಹಿಂದೆ ಸಂಸ್ಥೆಯ ಟ್ರಸ್ಟಿ ಸ್ಥಾನದಿಂದ ವಜಾಗೊಂಡಿರುತ್ತಾನೆ. ಇದಕ್ಕೆ ಪುಷ್ಠಿಯಾಗಿ ನಕಲಿ ವಿಮಾ ಪಾಲಿಸಿ ಮಾಡಿಸಿಕೊಟ್ಟ ರಾಕೇಶ್ ಎಂಬಾತನಿಗೆ ಸಹಾಯ ಮಾಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಸೂಕ್ತ ದಾಖಲೆ ಸಿಕ್ಕಿದ ತಕ್ಷಣ ಸಂಸ್ಥೆಯ ವಿರುದ್ಧ ಷಡ್ಯಂತರ ಮಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯ ಮಾಲೀಕರು ಸಂಸ್ಥೆಯ ಕಾನೂನು ಸಲಹೆಗಾರರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.