ಜನಮನ

ವೈದ್ಯಕೀಯ ಲೋಕದಲ್ಲಿ ಅಪರೂಪ ಘಟನೆ; 60 ವರ್ಷಗಳಿಂದ ಮಹಿಳೆ ಮಿದುಳಿನಲ್ಲೇ ಗುಂಡು!

Views: 59

ಕನ್ನಡ ಕರಾವಳಿ ಸುದ್ದಿ: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಘಟನೆಗಳು ನಂಬಲಾರದಷ್ಟು ವಿಚಿತ್ರವಾಗಿರುತ್ತವೆ. ಅಂಥದ್ದೇ ಒಂದು ಅಚ್ಚರಿಯ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮಿದುಳಿನೊಳಗೆ ಸುಮಾರು 60 ವರ್ಷಗಳಿಂದ ಗುಂಡೊಂದು ಇದ್ದರೂ, ಅವರಿಗೆ ಅದರ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂಬುದು ಬಹಿರಂಗವಾಗಿದೆ.

ಹುನಾನ್ ಪ್ರಾಂತ್ಯದ 67 ವರ್ಷದ ಶ್ರೀಮತಿ ಝಾವೋ ಈ ಘಟನೆಗೆ ಕೇಂದ್ರಬಿಂದು. ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡ ಕಾರಣ ಅವರು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಸ್ಕ್ಯಾನ್ ಮಾಡಿದಾಗ ಅವರ ಮಿದುಳಿನೊಳಗೆ ಅಪರಿಚಿತ ವಸ್ತುವೊಂದು ಕಂಡುಬಂದಿದೆ. ಇನ್ನಷ್ಟು ಪರಿಶೀಲನೆ ನಡೆಸಿದಾಗ ಅದು ಬಂದೂಕಿನ ಗುಂಡು ಎಂಬುದು ಸ್ಪಷ್ಟವಾಗಿದೆ.

ಈ ಸಂಗತಿ ತಿಳಿದ ನಂತರ, ಝಾವೋ ತಮ್ಮ ಬಾಲ್ಯದ ಒಂದು ಘಟನೆ ನೆನಪಿಸಿಕೊಂಡರು. ಅವರು ಚಿಕ್ಕವಯಸ್ಸಿನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಲ್ಲು ತಗುಲಿದಂತೆ ಅನುಭವವಾಗಿದ್ದು, ರಕ್ತಸ್ರಾವವೂ ಆಗಿತ್ತು. ಆದರೆ, ಅದನ್ನು ಸಾಮಾನ್ಯ ಗಾಯವೆಂದು ಭಾವಿಸಿ ಚಿಕಿತ್ಸೆ ಪಡೆದು ಮರೆತಿದ್ದರು. ವಾಸ್ತವದಲ್ಲಿ ಅಂದು ಅವರ ತಲೆಗೆ ಗುಂಡು ತಗುಲಿ, ಅದು ಮಿದುಳಿನೊಳಗೆ ಸಿಲುಕಿಕೊಂಡಿತ್ತು.

ಆಶ್ಚರ್ಯಕರ ಸಂಗತಿಯೇನೆಂದರೆ, ಆ ಗುಂಡು ಮಿದುಳಿನ ಅತ್ಯಂತ ಸೂಕ್ಷ್ಮ ಭಾಗವಲ್ಲದ ಸ್ಥಳದಲ್ಲಿ ಸಿಲುಕಿಕೊಂಡಿದ್ದರಿಂದ ಯಾವುದೇ ಗಂಭೀರ ಸಮಸ್ಯೆ ಉಂಟಾಗಿರಲಿಲ್ಲ. ಮಿದುಳಿನ ಕೋಶಗಳು ಅದರ ಸುತ್ತಲೂ ಹೊಂದಿಕೊಂಡಿದ್ದರಿಂದ, ಅವರಿಗೆ ಯಾವುದೇ ರೀತಿಯ ವಿಚಿತ್ರ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ.

ವೈದ್ಯರ ಪ್ರಕಾರ, ಈ ಗುಂಡನ್ನು ಈಗ ಹೊರತೆಗೆದರೆ ಮಿದುಳಿನ ಇತರ ಭಾಗಗಳಿಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಮಾಡದೇ, ಹಾಗೆಯೇ ಇರಿಸುವುದೇ ಸುರಕ್ಷಿತ ಎಂದು ಸಲಹೆ ನೀಡಿದ್ದಾರೆ.

ಈ ಅಪರೂಪದ ಘಟನೆ ಇದೀಗ ಸಾಮಾಜಿಕ ಚರ್ಚೆಗೆ ಭಾರೀ ಜಾಲತಾಣಗಳಲ್ಲಿ ಕಾರಣವಾಗಿದ್ದು, ವೈದ್ಯಕೀಯ ಲೋಕದಲ್ಲಿಯೂ ಕುತೂಹಲ ಮೂಡಿಸಿದೆ.

Related Articles

Back to top button
error: Content is protected !!