ಇತರೆ

ವೇಗವಾಗಿ ಹಣ ಸಂಪಾದಿಸುವ ಭರದಲ್ಲಿ ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಯುವಕ

Views: 100

ಕನ್ನಡ ಕರಾವಳಿ ಸುದ್ದಿ: ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಂಡು ಕೋಟಿ ಕೋಟಿ ಹಣ ದೋಚುತ್ತಿದ್ದಾರೆ. ಇಂತಹ ಕೃತ್ಯದಲ್ಲಿ ಯುವಕರೇ ಹೆಚ್ಚು ಭಾಗಿಯಾಗುತ್ತಿದ್ದಾರೆ. ಅದರಲ್ಲೂ ಕಾಲೇಜು ಅರ್ಧದಲ್ಲಿ ಬಿಟ್ಟು, ಇಂತಹ ಕೃತ್ಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ವೇಗವಾಗಿ ಹಣ ಸಂಪಾದಿಸುವ ಭರದಲ್ಲಿ 22 ವರ್ಷದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

ಪೊಲೀಸರು ನಡೆಸಿದ ಬೃಹತ್ ಸೈಬರ್ ಅಪರಾಧ ಕಾರ್ಯಾಚರಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಆನ್‌ಲೈನ್ ವಂಚನೆಗಳ ಮೂಲಕ ಕದ್ದ ಹಣವನ್ನು ಸ್ಥಳಾಂತರಿಸಲು ಬಳಸುತ್ತಿದ್ದ ಸಾವಿರಾರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಮೊಹಮ್ಮದ್ ಉಜೈಫ್ ಮತ್ತು ಅವನ ತಾಯಿ ಸಬಾನಾ ಅಬ್ದುಲ್ ಬಂಧಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಬಿಕಾಂ ಕೋರ್ಸ್ ಅರ್ಧಕ್ಕೆ ಬಿಟ್ಟ ಉಜೈಫ್, ಹಣ ಸಾಗಿಸುವ ದಲ್ಲಾಳಿಯಾಗಿ ಈ ವಂಚನೆ ಜಾಲದಲ್ಲಿ ಸೇರಿಕೊಳ್ಳುತ್ತಾನೆ. ತನ್ನ ತಾಯಿ ಸಹಾಯದಿಂದ, ಅವನು ಸುಮಾರು 4,200 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಇನ್ನು ಇವನ ಜತೆಗಿದ್ದ ಗುಂಪುಗಳು 9,000 ಅಂತಹದೇ ಖಾತೆಗಳನ್ನು ನಿರ್ವಹಿಸುತ್ತಿತ್ತು. ಈ ಖಾತೆಗಳ ಮೂಲಕ ಸುಮಾರು 24 ಕೋಟಿ ರು. ನಿರ್ವಹಣೆ ಮಾಡಲಾಗುತ್ತಿತ್ತು. ಉಜೈಫ್ ಒಬ್ಬನೇ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದುಬೈ ಮೂಲದ ಭಾರತೀಯ ವ್ಯಕ್ತಿ ಪ್ರೇಮ್ ತನೇಜಾ ಜತೆಗೆ ಈ ಹಣ ಸಾಗಣೆಯನ್ನು ವಹಿವಾಟುಗಳನ್ನು ಹೊಂದಿದ್ದ ಎಂದು ವರದಿ ಹೇಳಿದೆ. ಪ್ರೇಮ್ ತನೇಜಾ ಅನ್ನು ಈ ಹಿಂದೆ 2013 ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ವ್ಯವಹಾರವನ್ನು ಮಾಡಲು ಪ್ರೇಮ್ ತನೇಜಾ, ಉಜೈಫ್‌ನ ತಾಯಿ ಜತೆಗೆ ಪ್ರಯಾಣ ಬೆಳೆಸಿದ್ದ ಎಂದು ಅಧಿಕಾರಿಗಳು ಹೇಳುತ್ತಾರೆ. ಇವರು ಈ ಜಾಲದ ಮುಂದುವರಿದ ಭಾಗವಾಗಿ ಇಬ್ಬರೂ, ಸರಕಾರಿ ಆಸ್ಪತ್ರೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಹಾಗೂ ವಿದ್ಯಾರ್ಥಿಗಳನ್ನು 2 ಸಾವಿರ ಹಾಗೂ 5 ಸಾವಿರ ರು.ಗಳ ಖಾತೆ ತೆರೆಯುವಂತೆ ಅವರನ್ನು ಒತ್ತಾಯಿಸುತ್ತಿದ್ದರು. ಕೆಲವೊಂದು ವಿದ್ಯಾರ್ಥಿಗಳು ಹಾಗೂ ಜನರು ಇವರ ಮೋಸದ ಜಾಲಕ್ಕೆ ಬಿದ್ದು, ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಇತರ ದಾಖಲೆಯನ್ನು ಈ ಮೋಸಗಾರರಿಗೆ ನೀಡಿದ್ದಾರೆ.

ನಂತರ ಈ ದಾಖಲೆಗಳನ್ನು ದೆಹಲಿಯಲ್ಲಿರುವ ಸಹವರ್ತಿಗಳಿಗೆ ಕಳುಹಿಸುತ್ತಿದ್ದರು. ನಂತರ ಅಲ್ಲಿಂದ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣವನ್ನು ಕಬಳಿಸುತ್ತಿದ್ದರು. ಈ ಕೆಲಸ ಮಾಡಿದಕ್ಕೆ ಉಜೈಫ್‌ನ ಮತ್ತು ಆತನ ತಾಯಿಗೆ ಹಣವನ್ನು ಸಂಬಳದ ರೂಪದಲ್ಲಿ ನೀಡುತ್ತಿದ್ದರು. ಈ ಇಬ್ಬರಿಗೆ ಸಹಾಯ ಮಾಡಿದಕ್ಕಾಗಿ ದೆಹಲಿಯ ಒಂಬತ್ತು ಯುವಕರನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿದ್ದಾರೆ. ದೇಶಾದ್ಯಂತ 864 ಸೈಬರ್ ಅಪರಾಧ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ ಎಂದು ಹೇಳಲಾಗಿದೆ.

Related Articles

Back to top button
error: Content is protected !!