ವಿವಾಹಿತೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಕೊಂದ ಪ್ರಿಯಕರ, ಮೊಬೈಲ್ ಸ್ಫೋಟದ ಕಥೆ ಕಟ್ಟಲು ಯತ್ನಿಸಿ ವಿಫಲ!

Views: 185
ಕನ್ನಡ ಕರಾವಳಿ ಸುದ್ದಿ: ಲಾಡ್ಜ್ ಒಂದರಲ್ಲಿ ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಫೋಟಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಇದು ಮೊಬೈಲ್ ಸ್ಫೋಟದಿಂದ ಆದದ್ದು ಎಂದು ಕಥೆ ಕಟ್ಟಲು ಯತ್ನಿಸಿ, ಅದರಲ್ಲಿ ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ.
ಮೈಸೂರಿನ ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿರುವ ಲಾಡ್ಜ್‌ನಲ್ಲಿ ಗೆರಸನಹಳ್ಳಿ ಗ್ರಾಮದ ರಕ್ಷಿತಾ (20) ಎಂಬಾಕೆಯನ್ನು ಪ್ರಿಯಕರ ಬಿಳಿಕೆರೆ ಗ್ರಾಮದ ಸಿದ್ಧರಾಜು ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಗೆರಸನಹಳ್ಳಿ ಗ್ರಾಮದ ರಕ್ಷಿತಾ, ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ ಸಿದ್ಧರಾಜು ಜೊತೆಗೆ ರಕ್ಷಿತಾ ಅನೈತಿಕ ಸಂಬಂಧವನ್ನು ಹೊಂದಿದ್ದರು. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂಬುದಾಗಿ ಸಿದ್ದರಾಜು ರಕ್ಷಿತಾಳನ್ನು ಕರೆತಂದಿದ್ದ. ಭೇರ್ಯ ಗ್ರಾಮದ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ. ಲಾಡ್ಜ್‌ನಲ್ಲಿ ಅಕ್ಷತಾ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿ ಹತ್ಯೆಗೈದಿದ್ದಾನೆ. ಆ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದಾನೆ. ಆದರೆ ಸ್ಥಳದಲ್ಲಿ ಯಾವುದೇ ಮೊಬೈಲ್ ಕಂಡುಬರದ ಕಾರಣ ಅನುಮಾನ ಬಂದಿದೆ.
ಮೊಬೈಲ್ ಎಲ್ಲಿ ಎಂಬುದಾಗಿ ಕೇಳಿದಾಗ ಬಿಸಾಕಿದ್ದಾಗಿ ಸಿದ್ಧರಾಜು ಸುಳ್ಳು ಹೇಳಿದ್ದ. ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಲಾಡ್ಜ್ ಸಿಬ್ಬಂದಿ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಸಾಲಿಗ್ರಾಮ ಠಾಣೆಯ ಪೊಲೀಸರು ಬಂದು ಪರಿಶೀಲಿಸಿ, ಸಿದ್ದರಾಜು ವಿಚಾರಣೆ ನಡೆಸಿದಾಗ ವಿವಾಹಿತ ಮಹಿಳೆ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿದ ವಿಚಾರ ಬಾಯಿ ಬಿಟ್ಟಿದ್ದಾನೆ. ಸಾಲಿಗ್ರಾಮ ಪೊಲೀಸರು ಸಿದ್ದರಾಜುನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.