ಸಾಂಸ್ಕೃತಿಕ

ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ನಟ ನಟಿಯರು ಸಿಸಿಐ ವಶಕ್ಕೆ 

Views: 393

ಬೆಂಗಳೂರು :ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು ರೇವ್ ಪಾರ್ಟಿ ಮಾಡುತ್ತಿರುವುದು ಅದರಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿರುವುದು ಕಂಡುಬಂದಿದ್ದು, ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿವೆ.

ಜೊತೆಗೆ ನಿಷೇಧಿತ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿವೆ. ಜೊತೆಗೆ ಪಾರ್ಟಿಯಲ್ಲಿ ಆಂಧ್ರ ಮತ್ತು ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ಡ್ರಗ್ಸ್ ಬಳಕೆ ಮತ್ತಿತರ ವಿಚಾರಗಳ ಬಗ್ಗೆ ವಿಚಾರಣೆಗೆ ಗುರಿ ಪಡಿಸಲಾಗಿದೆ.

ಪಾರ್ಟಿಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಕಂಡುಬಂದರು. ಇವರು ಆಹ್ವಾನಿತರಾಗಿ ಪಾರ್ಟಿಯಲ್ಲಿ ಭಾಗವಹಿಸಲು ಬಂದರೇ ಅಥವಾ ದುಡ್ಡು ನೀಡಿ ಕರೆಸಲಾಯಿತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇವರಲ್ಲಿ ಹಲವರು ತೆಲುಗು ನಟಿಯರು ಎಂದು ಗೊತ್ತಾಗಿದೆ. ಬಂದವರಲ್ಲಿ ಹೆಚ್ಚಿನವರು ಕೂಡ ತೆಲುಗಿನವರು.

ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್ ಫಾರ್ಮ್ಸ್ ಹೌಸ್‌ನಲ್ಲಿ ಬರ್ತ್‌ಡೇ ಹೆಸರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ತಡರಾತ್ರಿ ಎರಡು ಗಂಟೆ ದಾಟಿದರೂ ಪಾರ್ಟಿ ನಡೆಯುತ್ತಿತ್ತು. ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಗೆ ಇದರ ಮಾಹಿತಿ ತಿಳಿದು ದಾಳಿ ಮಾಡಿದ್ದಾರೆ. ಅವಧಿ ಮೀರಿ ಪಾರ್ಟಿ ಮಾಡಲಾಗಿದ್ದು, ಪಾರ್ಟಿಯಲ್ಲಿ ಸಾಕಷ್ಟು ಡ್ರಗ್ಸ್ ಪತ್ತೆಯಾಗಿವೆ.

ಕಾನ್‌ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರ ಮಾಲಿಕತ್ವದ ಫಾರ್ಮ್ ಹೌಸ್‌ನಲ್ಲಿ ಇದು ನಡೆದಿದ್ದು, ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಗೆ ಆಂಧ್ರಪ್ರದೇಶದಿಂದ ಫ್ಲೈಟ್‌ನಲ್ಲಿ ಹಲವರನ್ನು ಕರೆಸಿಕೊಂಡಿದ್ದ. ಒಂದು ಬೆಂಜ್ ಕಾರಿನಲ್ಲಿ ಆಂಧ್ರಪ್ರದೇಶದ ಎಂಎಲ್‌ಎ ಒಬ್ಬರ ಪಾಸ್ ಪತ್ತೆಯಾಗಿದೆ. ಎಂಎಲ್‌ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಕಂಡುಬಂದಿದೆ.

ಪಾರ್ಟಿ ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ವಿಲಾಸಿ ಕಾರುಗಳು ಪತ್ತೆಯಾಗಿವೆ. ದುಬಾರಿ ಮರ್ಸಿಡಿಸ್ ಬೆಂಜ್, ಜಾಗ್ವಾರ್, ಆಡಿ ಕಾರುಗಳಲ್ಲಿ ಕುಬೇರರು ಬಂದಿದ್ದುದು ಗೊತ್ತಾಗಿದೆ. ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂದು ಆಯೋಜಿಸಲಾಗಿತ್ತು. ಭಾನುವಾರ ಸಂಜೆ ಐದು ಗಂಟೆಯಿಂದ ಬೆಳಗ್ಗೆ ಆರು ಗಂಟೆ ತನಕ ಪಾರ್ಟಿ ನಡೆಸಲು ಉದ್ದೇಶಿಸಲಾಗಿತ್ತು.

ನಗರದ ಒಳಭಾಗದಲ್ಲಿ ಸಿಸಿಬಿ ಪೊಲೀಸರು ಇಂಥ ಪಾರ್ಟಿಗಳ ಮೇಲೆ ನಿರಂತರ ನಿಗಾ ಇಟ್ಟಿದ್ದು, ದಾಳಿಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ನಗರದ ಹೊರ ವಲಯದಲ್ಲಿ ಕಳ್ಳತನದಿಂದ ಪಾರ್ಟಿ ಆಯೋಜಿಸಲಾಗಿದೆ. ಇಂಥ ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಲಾಗುತ್ತದೆ. ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್‌ಗಳು ಹಾಗು ಟೆಕ್ಕಿಗಳು ಪತ್ತೆಯಾಗಿದ್ದಾರೆ. ಡಿಜೆಗಳಾದ ರಾಬ್ಜ್,, ಕವೀ, ಮತ್ತು ಬ್ಲಡಿ ಮಾಸ್ಕರ ಭಾಗಿಯಾಗಿದ್ದು, ಎಲ್ಲರನ್ನೂ ಪ್ರಶ್ನಿಸಲಾಗುತ್ತಿದೆ. ನಾರ್ಕೊಟಿಕ್ಸ್ ಸ್ನಿಫರ್ ಡಾಗ್‌ಗಳಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ.

 

Related Articles

Back to top button
error: Content is protected !!