ರಾಷ್ಟ್ರೀಯ ಹೆದ್ದಾರಿ 66ರ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಮಂಗಳೂರು– ಮರವಂತೆ ವರೆಗೆ ಸಮುದ್ರಯಾನ ‘ಫೆರ್ರಿ’ ಯೋಜನೆ
Views: 565
ಕನ್ನಡ ಕರಾವಳಿ ಸುದ್ದಿ: ಕರಾವಳಿಯ ಸಾರಿಗೆ ಸಂಪರ್ಕ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಲು ಕರ್ನಾಟಕ ಕರಾವಳಿ ಜಲಸಾರಿಗೆ ಮಂಡಳಿ (ಮರಿಟೈಮ್ ಬೋರ್ಡ್) ಎರಡು ಬೃಹತ್ ಯೋಜನೆಗಳನ್ನು ಘೋಷಿಸಿದೆ.


ಮಂಗಳೂರು – ಮರವಂತೆ ಕರಾವಳಿ ಫೆರ್ರಿ ಸೇವೆ ಮಂಗಳೂರಿನಿಂದ ಕುಂದಾಪುರ ತಾಲೂಕಿನ ಮರವಂತೆಯ ವರೆಗೆ ಸುಮಾರು 110 ಕಿ.ಮೀ ಉದ್ದದ ಜಲಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ. ಫೆರ್ರಿ ಸೇವೆಯು ಹಳೆ ಮಂಗಳೂರು ಬಂದರು, ಹೆಜಮಾಡಿ, ಮಲ್ಪೆ ಕೋಟ ಮತ್ತು ಮರವಂತೆ ಹೀಗೆ ಒಟ್ಟು ಐದು ಕಡೆಗಳಲ್ಲಿ ನಿಲುಗಡೆ ಹೊಂದಿರಲಿದೆ. ಅಂದಾಜು 37.8 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸಲಾಗುವುದು. ಆಯ್ಕೆಯಾದ ಸಂಸ್ಥೆಗೆ 20 ವರ್ಷಗಳ ಕಾಲ ನಿರ್ವಹಣೆಯ ಜವಾಬ್ದಾರಿ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆ ಇರುವ ಐದೂ ಸ್ಥಳಗಳಲ್ಲಿ ಅತ್ಯಾಧುನಿಕ ಜೆಟ್ಟಿಗಳನ್ನು (ದೋಣಿ ನಿಲ್ದಾಣ) ನಿರ್ಮಿಸಲು ಉದ್ದೇಶಿಸಲಾಗಿದೆ.

ಮಂಗಳೂರಿಗೆ ಜಲ ಮೆಟ್ರೋ ಯೋಜನೆ
ಇದೇ ವೇಳೆ, ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುಮಾರು 180 ಕೋಟಿ ರೂ. ಹೂಡಿಕೆಯೊಂದಿಗೆ ‘ಜಲ ಮೆಟ್ರೋ’ ಯೋಜನೆಯನ್ನು ರೂಪಿಸಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಮಳವೂರು ಸೇತುವೆಯಿಂದ ಜಪ್ಪಿನಮೊಗರು ಸೇತುವೆಯ ವರೆಗೆ ಈ ಸೇವೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಗುರುಪುರ ಮತ್ತು ನೇತ್ರಾವತಿ ನದಿಗಳ ಮೂಲಕ ಹಳೆ ಮಂಗಳೂರು ಬಂದರನ್ನು ಸಂಪರ್ಕಿಸುವ ಈ ಮಾರ್ಗವು ನಗರದ ವಿವಿಧ ಭಾಗಗಳನ್ನು ಜೋಡಿಸಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ
ಮರವಂತೆಯಂತಹ ಪ್ರವಾಸಿ ತಾಣಗಳಿಗೆ ಸಮುದ್ರ ಮಾರ್ಗದ ಮೂಲಕ ಪ್ರಯಾಣಿಸುವುದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ. ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಈ ಜಲ ಸಾರಿಗೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆರ್ಥಿಕತೆಗೆ ದೊಡ್ಡ ಬಲ ನೀಡಲಿದೆ ಎಂದು ಮಂಡಳಿಯ ಅಧಿಕಾರಿಗಳು ಆಶಿಸಿದ್ದಾರೆ.






