ಜನಮನ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಮಾಹಿತಿ ಬಾಯ್ಬಿಟ್ಟ ಉಗ್ರರು

Views: 145

ಬೆಂಗಳೂರು,ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗದ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆಸಿರುವುದನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಅಧಿಕಾರಿಗಳ ವಿಚಾರಣೆಯಲ್ಲಿ ಬಾಂಬರ್ ಸೇರಿ ಇಬ್ಬರು ಶಂಕಿತ ಉಗ್ರರು ಬಾಯ್ಬಿಟ್ಟಿದ್ದಾರೆ.

ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಜೀಬ್ ,ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿರಲಿಲ್ಲ. ಆಟೋದಲ್ಲಿ ತೆರಳುವಾಗ ಆಕಸ್ಮಿಕವಾಗಿ ಸ್ಫೋಟಗೊಂಡು ಮೊಹಮ್ಮದ್ ಶಾರೀಕ್ ಸಿಕ್ಕಿಬಿದ್ದು, ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಕಾರಣ ತಾವೇ ಫೀಲ್ಡಿಗೆ ಇಳಿದು, ರಾಮೇಶ್ವರಂ ಕೆಫೆ ಸ್ಫೋಟಗೊಳಿಸಿದ್ದೇವೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆ ಸ್ಫೋಟದ ಕುರಿತು ಮೊಹಮ್ಮದ್ ಶಾರೀಕ್‌ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಅವರ ಹೆಸರು ಬಾಯಿಬಿಟ್ಟಿದ್ದ.

ಇದರಿಂದಾಗಿ ಎನ್‌ಐಎ ಅಧಿಕಾರಿಗಳು ತನಿಖೆ ಕ್ಷಿಪ್ರಗೊಳಿಸಲು ಸಾಧ್ಯವಾಯಿತು ಎನ್ನಲಾಗಿದೆ.

ಇನ್ನು, 2022ರ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಐಸಿಸ್ ಶಂಕಿತ ಜಮೇಶ್ ಮುಬೀನ್ ಮೃತನಾದ ಕಾರಣ ಇದರಲ್ಲೂ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಐಇಡಿಗಳನ್ನು ತಯಾರಿಸುವಲ್ಲಿ ನಿಪುಣನಾಗಿದ್ದ ಜಮೇಶ್ ಮುಬೀನ್ ಮೃತನಾಗಿದ್ದ. ಇದನ್ನು ಶಂಕಿತರು ಹಿನ್ನಡೆ ಎಂದೇ ಭಾವಿಸಿದ್ದರು ಎನ್ನಲಾಗಿದೆ.

2022ರಲ್ಲಿ ಶಿವಮೊಗ್ಗದಲ್ಲಿ ವೀರ ಸಾರ್ವಕರ್ ಭಾವಚಿತ್ರ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ ಹಿಂದುಪರ ಸಂಘಟನೆಯ ಯುವಕನಿಗೆ ಚಾಕು ಇರಿತವಾಗಿತ್ತು. ಕೃತ್ಯದಲ್ಲಿ ಜಬ್ಬೀವುಲ್ಲಾ ಖಾನ್‌ನನ್ನು ಬಂಧಿಸಿ ಮೊಬೈಲ್ ಪರಿಶೀಲನೆ ನಡೆಸಿದಾಗ ಶಿವಮೊಗ್ಗದ ತೀರ್ಥಹಳ್ಳಿಯ ನದಿತೀರದಲ್ಲಿ ಕಚ್ಚಾ ಬಾಂಬ್(ಟ್ರಯಲ್ ಬಾಂಬ್) ತಯಾರಿಸಿ ಪ್ರಯೋಗ ನಡೆಸಿದ್ದರು. ಇದಾದ ಬಳಿಕ ಶಾರೀಕ್ ತಪ್ಪಿಸಿಕೊಂಡು ಅದೇ ವರ್ಷ ನವೆಂಬರ್‌ನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಿಸಲಾಗಿತ್ತು. ಆದರೂ, ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗದ ಕಾರಣ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲು ಸಂಚು ರೂಪಿಸಲಾಗಿದೆ ಎಂಬುದಾಗಿ ಬಾಂಬರ್‌ಗಳು ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಜೀಬ್‌ನನ್ನು ನ್ಯಾಯಾಲಯವು 10 ದಿನಗಳವರೆಗೆ ಎನ್‌ಐಎ ಕಸ್ಟಡಿಗೆ ನೀಡಲಾಗಿದ್ದು, ವಿಚಾರಣೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.

Related Articles

Back to top button
error: Content is protected !!