ಜನಮನ

ರಾಜ್ಯದ 30 ಕಡೆಗಳಲ್ಲಿ ಲೋಕಾಯುಕ್ತ ಹಠಾತ್ ದಾಳಿ, ಅಪಾರ ಅಕ್ರಮ ಆಸ್ತಿ -ಪಾಸ್ತಿ ಪತ್ತೆ

Views: 102

ಬೆಂಗಳೂರು, ಇಂದು ಬೆಳ್ಳಂಬೆಳಿಗ್ಗೆ 6 ಮಂದಿ ಅಧಿಕಾರಿಗಳ ನಿವಾಸಗಳು ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ  ಲೋಕಾಯುಕ್ತರು ದಾಳಿ ಮಾಡಿ ಭಾರಿ ಪ್ರಮಾಣದ ಅಕ್ರಮ ಆಸ್ತಿ -ಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಬೆಸ್ಕಾಂನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್, ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ಸತೀಶ್ ಬಾಬು ಸೇರಿದಂತೆ ಐವರು ಅಧಿಕಾರಿಗಳು ಮತ್ತು ಚೆನ್ನೆನ ಹಳ್ಳಿ ಗ್ರಾಮ ಪಂಚಾಯಿತ್ ಸದಸ್ಯ ಎಚ್.ಎಸ್. ಸುರೇಶ್ ಅವರ ಮನೆಗಳ ಮೇಲೆ ಹಠಾತ್ ದಾಳಿ ಮಾಡಿ ಅಕ್ರಮ ಆಸ್ತಿ-ಪಾಸ್ತಿ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ.

ಕುಂದಾಣಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಕಾರ್ಯ ಡಿ.ಎನ್. ಪದ್ಮನಾಭ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮುನೀರ್, ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಬಿ. ಮಂಜೇಶ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಕ್ರಮ ಆಸ್ತಿ-ಪಾಸ್ತಿ ಸಂಬಂಧಿಸಿದಂತೆ ದಾಖಲೆಗಳನ್ನು ಜಾಲಾಡಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ 6 ಮಂದಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು, ರಾಮನಗರ, ಬಳ್ಳಾರಿ, ಚಿತ್ರದುರ್ಗ, ಮಂಡ್ಯ, ವಿಜಯನಗರ ಸೇರಿದಂತೆ 30 ಸ್ಥಳಗಳ ಮೇಲೆ ದಾಳಿ ಮಾಡಿ ತಪಾಸಣೆ ಕೈಗೊಳ್ಳಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದು ಭ್ರಷ್ಟಾಧಿಕಾರಿಗಳ ಮನೆಗಳು, ಕಚೇರಿಗಳು, ಸಂಬಂಧಿಕರು ಮತ್ತು ಬೇನಾಮಿ ವ್ಯಕ್ತಿಗಳ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ.

ನಾಗರಾಜ್ ಕೆಲ ದಿನಗಳ ಹಿಂದೆ 7.50 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ವಿಜಯನಗರದಲ್ಲಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ಬೆಂಗಳೂರಿನಲ್ಲೂ ಮನೆ ಹೊಂದಿದ್ದು, ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ನಾಗರಾಜ್ ಪತ್ನಿಯ ಸಮ್ಮುಖದಲ್ಲಿ ಅವರಿ ಗೆ ಸಂಬಂಧಿಸಿದ ಬಿಎಡ್ ಕಾಲೇಜ್, ಡಿಇಡಿ ಕಾಲೇಜು, ಐಟಿಐ ಕಾಲೇಜು, ಪಿಯು ಕಾಲೇಜ್‌ಗಳನ್ನು ತಪಾಸಿಸಲಾಗುತ್ತಿದೆ. ನಾಗರಾಜ್ ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ಹೊಂದಿದ್ದಾರೆ.

ಮಂಡ್ಯದ ಮೂರು ಕಡೆ ದಾಳಿ:ಬಿಬಿಎಂಪಿ ಅಧಿಕಾರಿ ಮಂಜೇಶ್ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮಂಡ್ಯದಲ್ಲಿ ಮೂರು ಕಡೆ, ಮಳವಳ್ಳಿ ತಾಲೂಕಿನ ಹಲಗೂರು ಹಾಗೂ ಗುಂಡಾಪುರದಲ್ಲಿ ಮಂಜೇಶ್ ಸಂಬಂಧಿ ಸುರೇಂದ್ರ ಎಂಬವವರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮದ್ದೂರಿನ ಎಸ್.ಐ.ಕೋಡಿಹಳ್ಳಿಯಲ್ಲಿರುವ ಮಂಜೇಶ್ ಅಜ್ಜಿಯ ಮನೆಯ ಮೇಲೂ ದಾಳಿ ನಡೆಸಲಾಗಿದೆ.

ನಗರದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ಪ್ಲಾನ್, ಒಸಿ ನೀಡಲು ಭಾರಿ ಪ್ರಮಾಣದಲ್ಲಿ ಲಂಚ ಪಡೆದಿರುವ ಆರೋಪ ಮಂಜೇಶ್ ಮೇಲಿದೆ. ಪ್ಲಾನ್ ಉಲ್ಲಂಘಿಸಿದ ಕಟ್ಟಡಗಳಿಗೂ ಒಸಿ ನೀಡುತ್ತಿದ್ದ ಆರೋಪವಿದೆ.

ಎಜಿಒ ಸುರೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣ ನಗದು ಹಾಗೂ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳ ಬಳಿ ಜಪ್ತಿ ಮಾಡಿರುವ ನಗದು,ಚಿನ್ನಾಭರಣ,ಆಸ್ತಿಪಾಸ್ತಿಗಳ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿ ಸತೀಸ್ ಬಾಬು ನಿವಾಸದಲ್ಲಿ ಲೋಕಾಯುಕ್ತರು ದಾಳಿ ಮಾಡಿದ ನಿವಾಸದಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಬೆಳ್ಳಿ, ಚಿನ್ನ ಕಂಡು ಅಧಿಕಾರಿಗಳು ದಿಗ್ಭ್ರಮೆ ಒಳಗಾದರು. ಮತ್ತೊಂದೆಡೆ ಎಜೆಓ ಸುರೇಶ್ ನಿವಾಸದಲ್ಲಿ ಕಂತೆ, ಕಂತೆ ನೋಟುಗಳು ಪತ್ತೆಯಾಗಿವೆ. ಅಲ್ಲದೆ ಭಾರಿ ಬೆಲೆಯ ಮದ್ಯದ ಬಾಟೀಲುಗಳು ಪತ್ತೆಯಾಗಿದ್ದು ಶೋಧನಾ ಕಾರ್ಯ ಮುಂದುವರಿದಿದೆ.

Related Articles

Back to top button
error: Content is protected !!