ಇತರೆ

ರಹಸ್ಯ ಕಾರ್ಯಾಚರಣೆ ನಡೆಸಿ ಪಬ್‌ನಲ್ಲಿ ನಡೆಯುತ್ತಿದ ಸೆಕ್ಸ್ ದಂಧೆ ಬಯಲಿಗೆಳೆದ ಮಹಿಳಾ ಐಪಿಎಸ್

Views: 54

ಕನ್ನಡ ಕರಾವಳಿ ಸುದ್ದಿ : ಹೈದರಾಬಾದ್ ನಗರದ ಖಾಸಗಿ ಪಬ್‌ನಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನು ಬಯಲಿಗೆಳೆಯಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ.

ಪಬ್‌ಗೆ ತೆರಳಿ ರಹಸ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಬಳಿಕ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, 9 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ.

ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕುಕತ್‌ಪಲ್ಲಿಯ ಜನಪ್ರಿಯ ಪಬ್ ಒಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ಹಾಗೂ ನಿಯಮಗಳ ಘೋರ ಉಲ್ಲಂಘನೆಯನ್ನು ಯುವ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ನಡೆಸಿದ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿದ್ದಾರೆ.

ಕುಕತ್‌ಪಲ್ಲಿ ವಲಯದ ಡಿಸಿಪಿ, 2018ರ ಬ್ಯಾಚ್‌ನ ದಕ್ಷ ಐಪಿಎಸ್ ಅಧಿಕಾರಿ ರಿತಿ ರಾಜ್ ಅವರು ಖುದ್ದು ದಾಳಿಯ ನೇತೃತ್ವ ವಹಿಸಿ ಈ ದಂಧೆಯನ್ನು ಪತ್ತೆಹಚ್ಚಿದ್ದಾರೆ.ಭಾನುವಾರ ಮುಂಜಾನೆ ಕುಕತ್‌ಪಲ್ಲಿಯ ಕೆಪಿಎಚ್‌ಬಿ ವ್ಯಾಪ್ತಿಯಲ್ಲಿ ‘ಕ್ಲಬ್ ಮಾಸ್ತಿ’ ಎಂದೇ ಖ್ಯಾತಿ ಪಡೆದಿರುವ ‘ಕಿಂಗ್ಸ್ ಅಂಡ್ ಕ್ವೀನ್ಸ್’ ಪಬ್ ಮೇಲೆ ಡಿಸಿಪಿ ರಿತಿ ರಾಜ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಅನಿರೀಕ್ಷಿತ ದಾಳಿ ನಡೆಸಿದರು. ಪಬ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.ಪೊಲೀಸ್ ತನಿಖೆಯ ಪ್ರಕಾರ, ಸದರಿ ಪಬ್‌ನಲ್ಲಿ ವೇಶ್ಯಾವಾಟಿಕೆ ಮತ್ತು ಅನೈತಿಕ ಕಳ್ಳಸಾಗಣೆಗೆ ವ್ಯವಸ್ಥಿತವಾಗಿ ಹೊಟೇಲ್ ನ ಆಡಳಿತ ಮಂಡಳಿಯೇ ಅನುಕೂಲ ಮಾಡಿಕೊಡುತ್ತಿತ್ತು. “ಪುರುಷ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ನಕಲಿ ಬಿಲ್‌ಗಳನ್ನು ಸೃಷ್ಟಿಸಲು ಪಬ್ ಮ್ಯಾನೇಜ್‌ಮೆಂಟ್ ಮಹಿಳೆಯರನ್ನು ಬಳಸಿಕೊಳ್ಳುತ್ತಿತ್ತು. ಗ್ರಾಹಕರಿಗಾಗಿ ಮಹಿಳೆಯರನ್ನು ಆಕರ್ಷಿಸಿ ಅನೈತಿಕ ದಂಧೆಗೆ ತಳ್ಳಲಾಗುತ್ತಿತ್ತು” ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ದಾಳಿಯ ವೇಳೆ ಪಬ್‌ನಲ್ಲಿ ಅಪ್ರಾಪ್ತ ವಯಸ್ಕರಿಗೆ ಮುಕ್ತವಾಗಿ ಮದ್ಯ ಪೂರೈಕೆ ಮಾಡುತ್ತಿರುವುದು ಪತ್ತೆಯಾಗಿದೆ. ನಿಗದಿತ ಸಮಯ ಮೀರಿದರೂ ಪಬ್ ಕಾರ್ಯನಿರ್ವಹಿಸುತ್ತಿದ್ದು, ನಿಯಮಬಾಹಿರವಾಗಿ ಮದ್ಯ ಮತ್ತು ಆಹಾರ ಒದಗಿಸಲಾಗುತ್ತಿತ್ತು. ಅತಿ ಮುಖ್ಯವಾಗಿ, ಈ ಪಬ್ ಮಾನ್ಯ ಪೊಲೀಸ್ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಇಲ್ಲದೆಯೇ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ವೇಳೆ ನಾಲ್ವರು ಮಹಿಳೆಯರು ಹಾಗೂ ಐದು ಪುರುಷರು ಸೇರಿದಂತೆ ಒಂಬತ್ತು ಮಂದಿ ಪಬ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಕೆಪಿಎಚ್‌ಬಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.ಈ ಪಬ್ ವಿರುದ್ಧ 2025 ರಲ್ಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ, ಆಡಳಿತ ಮಂಡಳಿ ತನ್ನ ಚಟುವಟಿಕೆ ನಿಲ್ಲಿಸಿರಲಿಲ್ಲ. ಸದ್ಯ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಹೊಸ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Related Articles

Back to top button
error: Content is protected !!