ಯುವತಿ ಬರ್ಬರ ಹತ್ಯೆ ಆರೋಪಿ ಬಂಧನ: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನ
Views: 116
ಕನ್ನಡ ಕರಾವಳಿ ಸುದ್ದಿ: ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಯುವತಿ ಲಾವಣ್ಯ (21) ಮೇಲೆ ಕತ್ತಿಯಿಂದ ಬರ್ಬರವಾಗಿ ಚೇತನ್ ದಾಳಿ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ಘಟನೆ ನಡೆದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಹಂತಕನ ಪತ್ತೆಗಾಗಿ ವಿಶೇಷ ತನಿಖಾ ಪಡೆಗಳನ್ನು ರಚಿಸಿದ್ದರು.
ಏಕಪಕ್ಷೀಯ ಪ್ರೇಮದ ಹಿನ್ನೆಲೆ – ಹೊಂಚು ಹಾಕಿ ಹತ್ಯೆ:ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹತರಾದ ಯುವತಿ ಹಾಗೂ ಆರೋಪಿ ಚೇತನ್ ಇಬ್ಬರೂ ದೂರದ ಸಂಬಂಧಿಗಳಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಚೇತನ್ ಮೃತ ಯುವತಿಯನ್ನು ಏಕಪಕ್ಷೀಯವಾಗಿ (ಒನ್ ಸೈಡ್) ಪ್ರೀತಿಸುತ್ತಿದ್ದು, ಆಕೆ ಈತನ ಪ್ರೇಮ ನಿವೇದನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಳು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಈತ, ಸಾರ್ವಜನಿಕ ನಿಲ್ದಾಣದಲ್ಲೇ ಹೊಂಚು ಹಾಕಿ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಚೇತನ್‌ನನ್ನು ಬಂಧಿಸಲು ಪೊಲೀಸರ ವಿಶೇಷ ತಂಡಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಜಾಲ ಬೀಸಿದ್ದವು. ಪೊಲೀಸರು ತನ್ನನ್ನು ಹಿಡಿಯುವುದು ಖಚಿತ ಎಂದು ಅರಿತ ಆರೋಪಿಯು, ಬಂಧನದಿಂದ ತಪ್ಪಿಸಿಕೊಳ್ಳಲು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
“ಬಿಸಿ ರೋಡ್ ಘಟನೆಯ ಆರೋಪಿಯನ್ನು ನಮ್ಮ ತಂಡಗಳು ಯಶಸ್ವಿಯಾಗಿ ಪತ್ತೆಹಚ್ಚಿವೆ. ಆದರೆ, ಆರೋಪಿಯು ಇಲಿ ಪಾಷಾಣ (ವಿಷ) ತೆಗೆದುಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆತನನ್ನು ಹೆಚ್ಚಿನ ವೈದ್ಯಕೀಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗಾಗಿ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಪ್ರಕರಣದ ಮುಂದಿನ ಹೆಚ್ಚಿನ ವಿವರಗಳನ್ನು ತನಿಖೆಯ ಬಳಿಕ ನೀಡಲಾಗುವುದು,” ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣದ ಅಡಿ ತನಿಖೆ ಮುಂದುವರಿದಿದ್ದು, ಆಸ್ಪತ್ರೆಯಲ್ಲಿ ಚೇತನ್ ಚೇತರಿಸಿಕೊಂಡ ಬಳಿಕ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.






