ಹಣದ ಆಸೆಗಾಗಿ 20 ವರ್ಷದ ಮಗಳನ್ನೇ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿದ ತಂದೆ-ತಾಯಿ!
Views: 118
ಕನ್ನಡ ಕರಾವಳಿ ಸುದ್ದಿ: ಹಣದ ಆಸೆಗಾಗಿ 20 ವರ್ಷದ ಮಗಳನ್ನು ವಿದೇಶದಲ್ಲಿ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿದ ಆರೋಪ ಪೋಷಕರ ವಿರುದ್ಧ ಕೇಳಿಬಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ.
ಸೆನೆಗಲ್‌ನಲ್ಲಿ ಸಿಲುಕಿದ್ದ ಯುವತಿಯನ್ನು ಭಾರತೀಯ ರಾಯಭಾರ ಕಚೇರಿ ಹಾಗೂ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ದಂಪತಿ, ಗಿಡಮೂಲಿಕೆ ಹಾಗೂ ಸಾಂಪ್ರದಾಯಿಕ ಔಷಧ ವ್ಯಾಪಾರದ ಉದ್ದೇಶದಿಂದ ಸುಮಾರು ನಾಲ್ಕು ತಿಂಗಳ ಹಿಂದೆ ಪುತ್ರಿ ನಂದಿತಾ (20) ಅವರನ್ನು ಕರೆದುಕೊಂಡು ಪಶ್ಚಿಮ ಆಫ್ರಿಕಾದ ಸೆನೆಗಲ್‌ಗೆ ತೆರಳಿದ್ದರು.
ಸುಮಾರು 10 ದಿನಗಳ ಹಿಂದೆ ಪೋಷಕರು ಸೆನೆಗಲ್‌ನಲ್ಲಿದ್ದ ವೇಶ್ಯಾವಾಟಿಕೆ ಜಾಲಕ್ಕೆ ನಂದಿತಾಳನ್ನು ರೂ.7 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಭಾರತಕ್ಕೆ ಮರಳಿದ ಅವರು, “ಮಗಳು ಮೊದಲೇ ಭಾರತಕ್ಕೆ ಬಂದಿದ್ದಾಳೆ” ಎಂದು ಸ್ಥಳೀಯರಿಗೆ ಹೇಳಿ ನಿಜಾಂಶವನ್ನು ಮುಚ್ಚಿಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಸೆನೆಗಲ್‌ನಲ್ಲಿ ಸಿಲುಕಿದ್ದ ನಂದಿತಾ, ಅಲ್ಲಿಂದಲೇ ಪರಿಚಯಸ್ಥರನ್ನು ಸಂಪರ್ಕಿಸಿ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ ಎನ್ನಲಾಗಿದೆ. ತಂದೆ-ತಾಯಿಯೇ ಹಣಕ್ಕಾಗಿ ತನ್ನನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ, ತಾನು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ವಿಡಿಯೋ ಸಂದೇಶವನ್ನೂ ಕಳುಹಿಸಿದ್ದಾಳೆ. ಈ ಮಾಹಿತಿ ಗ್ರಾಮಸ್ಥರಿಗೆ ತಲುಪುತ್ತಿದ್ದಂತೆ ಆತಂಕ ಉಂಟಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಮುದಾಯದ ಮುಖಂಡರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ರಾಯಭಾರ ಕಚೇರಿ ಮತ್ತು ಸೆನೆಗಲ್‌ನ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ನಂದಿತಾಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಮುಖಂಡರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಯುವತಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.






