ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪ್ರತಿಷ್ಠಿತ “ಪಾರ್ತಿಸುಬ್ಬ” ಪ್ರಶಸ್ತಿ

Views: 12
ಉಡುಪಿ:ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪ್ರತಿಷ್ಠಿತ 2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆಯಾಗಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸೆಪ್ಟೆಂಬರ್ 14ರಂದು ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನವೆಂಬರ್ ತಿಂಗಳಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಒಂದು ಲಕ್ಷ ರೂ ನಗದು ಹಾಗೂ ಫಲಕ ಒಳಗೊಂಡಿದೆ.
2023ನೇ ಸಾಲಿನ ಗೌರವ ಪ್ರಶಸ್ತಿ ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ, ಮೂಡಲಪಾಯ ಯಕ್ಷಗಾನ ಭಾಗವತ ನಾರಾಯಣಪ್ಪ ಎಆರ್, ಅರ್ಥಧಾರಿ ಜಬ್ಬಾರ್ ಸಮೋ, ತೆಂಕು ಹಾಗೂ ಬಡಗಿನ ಪ್ರಸಿದ್ಧ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ತೆಂಕುತಿಟ್ಟಿನ ವೇಷಧಾರಿ ಚೆನ್ನಪ್ಪ ಗೌಡ ಸಜೀಪ ಅವರು ಆಯ್ಕೆಗೊಂಡಿದ್ದಾರೆ.
2023ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಿರಿಯ ವೇಷಧಾರಿ ರಘುನಾಥ ಶೆಟ್ಟಿ ಬಾಯಾರು, ಪ್ರಸಾದನ ಕಲಾವಿದ ಹಾಗೂ ವೇಷಧಾರಿ ದಿವಾಕರ ದಾಸ ಕಾವಳಕಟ್ಟೆ, ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ, ಬಡಗುತಿಟ್ಟಿನ ವೇಷಧಾರಿ ನರಾಡಿ ಭೋಜರಾಜ ಶೆಟ್ಟಿ, ಬಡಗುತಿಟ್ಟಿನ ಚೆಂಡೆ ವಾದಕ ಸದಾನಂದ ಪ್ರಭು, ಬಡಗುತಿಟ್ಟಿನ ಹಾಸ್ಯಗಾರ ಹೊಳೆಮಗೆ ನಾಗಪ್ಪ ಮರಕಾಲ, ಬಡಗುತಿಟ್ಟಿನ ವೇಷಧಾರಿ ಶಿರಳಗಿ ತಿಮ್ಮಪ್ಪ ಹೆಗಡೆ, ತೆಂಕು – ಬಡಗಿನ ಸ್ತ್ರೀವೇಷಧಾರಿ ಬಾಬು ಕುಲಾಲ್ ಹಳ್ಳಾಡಿ, ಮೂಡಲಪಾಯ ಭಾಗವತ ಶಿವಯ್ಯ, ಮೂಡಲಪಾಯ ಭಾಗವತ ಜೀಯಪ್ಪ ಆಯ್ಕೆಗೊಂಡಿದ್ದಾರೆ.
2023ನೇ ಸಾಲಿನ ದತ್ತಿನಿದಿ ಪ್ರಶಸ್ತಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಯು ಹೊನ್ನಾವರದ ಭಾಗವತ ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ ಅವರಿಗೆ ಘೋಷಣೆಯಾಗಿದೆ. 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನವನ್ನು ವಿದ್ವಾನ್ ಗಣಪತಿ ಭಟ್, ಡಾ. ಮನೋರಮಾ ಬಿಎನ್, ಡಾ. ಸತೀಶ್ ಜಿ ನಾಯ್ಕ, ಎಚ್ ಸುಜಯೀಂದ್ರ ಹಂದೆ ಅವರಿಗೆ ಘೋಷಣೆಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತ ಎನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಕಾಡೆಮಿ ಸದಸ್ಯರಾದ ಸುಧಾಕರ್ ಶೆಟ್ಟಿ ಉಳ್ಳಾಲ್, ವಿದ್ಯಾಧರ ಜಲವಳ್ಳಿ ಉಪಸ್ಥಿತರಿದ್ದರು.






