ಜನಮನ

ಮೆಣಸಿನಕಾಯಿ ಕಳ್ಳರನ್ನು ಮೆರವಣಿಗೆ ಮಾಡಿ,ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

Views: 0

ಗದಗ: ಮೆಣಸಿನಕಾಯಿ ಕಳ್ಳತನ ಮಾಡಿದ್ದ ಇಬ್ಬರನ್ನು ಊರು ತುಂಬಾ ಮೆರವಣಿಗೆ ಮಾಡಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯತ್ತಿನಹಳ್ಳಿ ಗ್ರಾಮದ ಶಿವು, ಮಂಜುನಾಥ ಮೆಣಸಿನಕಾಯಿ ಕಳ್ಳರು. ಬಂಪರ್​ ಬೆಲೆ ಇರೋ ಸಮಯದಲ್ಲೇ ರೈತರು ಬೆಳೆದಿರುವ ಮೆಣಸಿನಕಾಯಿಗಳನ್ನು ಮೂಟೆಯಲ್ಲಿ ತುಂಬಿಕೊಂಡು ಇಬ್ಬರು ಕಳ್ಳತನ ಮಾಡುತ್ತಿದ್ದರು. ಆದರೆ ಈ ವೇಳೆ ರೆಡ್​​ಹ್ಯಾಂಡ್​ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಗ್ರಾಮಸ್ಥರು ಇಬ್ಬರು ಕಳ್ಳರನ್ನು ಹಿಡಿದು ಒಬ್ಬನನ್ನು ದೇವಾಲಯದ ಕಂಬಕ್ಕೆ ಮೊದಲು ಕಟ್ಟಿ ಹಾಕಿದ್ದಾರೆ. ಇವನ ಭುಜದ ಮೇಲೆ ಇನ್ನೊಬ್ಬನನ್ನು ನಿಲ್ಲಿಸಿ ಕಟ್ಟಿ ಹಾಕಿದ್ದಾರೆ. ಅವರ ಮೇಲೆ ಮೆಣಸಿನಕಾಯಿ ಮೂಟೆ ಹೊರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇಷ್ಟೇ ಅಲ್ಲದೇ ಕಳ್ಳತನ ಮಾಡಿದ್ದ ಮೆಣಸಿನ ಕಾಯಿ ಮೂಟೆ ಅವರ ತಲೆ ಮೇಲೆ ಹೊರಿಸಿ, ಇಬ್ಬರನ್ನು ಊರೆಲ್ಲ ಮೆರವಣಿಗೆ ಮಾಡಿದ್ದಾರೆ.

ಈ ವೇಳೆ ಮುಂದೆ ಕಳ್ಳರು ಹೋಗುತ್ತಿದ್ದರೆ ಹಿಂದೆಯಿಂದ ರೈತರು ಬಾರುಕೋಲಿನಿಂದ ಹೊಡೆದಿದ್ದಾರೆ. ಹೀಗೆ ಕಳ್ಳರಿಗೆ ಥಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ, ಇನ್ನೊಮ್ಮೆ ಕಳ್ಳತನ ಮಾಡದಂತೆ ಪಾಠ ಕಲಿಸಿ ಬಿಟ್ಟು ಕಳಿಸಿದ್ದಾರೆ.

Related Articles

Back to top button
error: Content is protected !!