ಜನಮನ

ಮಿಚಾಂಗ್ ಚಂಡಮಾರುತ ಅಬ್ಬರ: 4೦ ಲಕ್ಷ ಜನರು ಸಂಕಷ್ಟದಲ್ಲಿ, ಅಪಾರ ಹಾನಿ

Views: 0

ಹೈದರಾಬಾದ್, ತಮಿಳುನಾಡಿನಲ್ಲಿ ವಿನಾಶಕಾರಿ ಮಿಜಾಂಗ್ ಚಂಡಮಾರುತ ಸಾಕಷ್ಟು ಹಾನಿ ಮಾಡಿದ ನಂತರ ಇದೀಗ ದುರ್ಬಲಗೊಂಡಿದ್ದು, ಆಂಧ್ರಪ್ರದೇಶದಲ್ಲಿ ಅಪಾರ ಹಾನಿ ಸೃಷ್ಟಿಸಿದೆ. ಚಂಡಮಾರುತದ ಅಬ್ಬರಕ್ಕೆ 770 ಕಿ.ಮೀ. ರಸ್ತೆ ಹಾನಿಯಾಗಿದ್ದು, 35 ಮರಗಳು ಧರೆಗುರುಳಿ ಬಿದ್ದಿವೆ.

25 ಹಳ್ಳಿಗಳು ಮುಳುಗಡೆಯಾಗಿ ಸೇರಿದಂತೆ 194 ಹಳ್ಳಿಗಳು, ಎರಡು ಪಟ್ಟಣಗಳು, ಕನಿಷ್ಠ 40ಲಕ್ಷ ಜನರು ಮಿಚಾಂಗ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಂಡಮಾರುತದ ಅಬ್ಬರಕ್ಕೆ ಗುಡಿಸಲು ಗೋಡೆ ಕುಸಿದು ಬಾಲಕ ಸಾವನ್ನಪ್ಪಿದ್ದಾನೆ ಎಂದು ಆಂಧ್ರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಬಿ.ಆರ್. ಅಂಬೇಡ್ಕರ್ ತಿಳಿಸಿದ್ದಾರೆ.

ಚಂಡಮಾರುತದಿಂದ ಹಾನಿಗೀಡಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ 204 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. 18773 ಆಹಾರ ಪೊಟ್ಟಣಗಳು, ಲಕ್ಷಾಂತರ ನೀರಿನ ಪ್ಯಾಕೇಟ್ ಗಳನ್ನು ವಿತರಿಸಲಾಗಿದ್ದು, ೮೦ಕ್ಕೂ ಹೆಚ್ಚು ಶಿಬಿರಗಳನ್ನು ಸ್ಥಾಪಿಸಲಾಗಿದೆ.

ಸಂತ್ರಸ್ತರ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳಿಗಾಗಿ 23 ಕೋಟಿ ಬಿಡುಗಡೆ ಮಾಡಿದೆ. ವರುಣನ ಅಬ್ಬರಕ್ಕೆ 232 ಮನೆಗಳು, 78 ಗುಡಿಸಲುಗಳು ನಾಶವಾಗಿದೆ. ನಲ್ಲೂರು ಜಿಲ್ಲೆಯ ಮನುಭೂಲೋವಿನಲ್ಲಿ 336.5 ಮಿ.ಮೀಟರ್ ಮಳೆ ದಾಖಲಾಗಿದೆ.

ಇತ್ತ ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ತಗ್ಗಿದ್ದು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಳೆಯಿಂದಾಗಿ ಇದುವರೆಗೂ 17 ಮಂದಿಯನ್ನು ಸಾವನ್ನಪ್ಪಿದ್ದು, ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ.

ಚೆನ್ನೈನಲ್ಲಿ 45 ಗಂಟೆಗಳ ಅವಧಿಯಲ್ಲಿ 60 ಸೆ.ಮೀ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರ ಪರಿಸ್ಥಿತಿ ಹೈರಾಣವಾಗಿದೆ. ಚೆನ್ನೈ ನಗರ ಸಹಜ ಸ್ಥಿತಿಗೆ ಮರಳಲು ಇನ್ನಷ್ಟು ಕಾಲಾವಕಾಶ ಬೇಕಾಗಿದೆ.

ಲಕ್ಷಾಂತರ ಜನರು, ಅದರಲ್ಲೂ ಉಪನಗರಗಳಲ್ಲಿ ಜನರು ಮನೆಯಿಂದ ಹೊರಗೆ ಬರಲಾಗದೆ ಪರದಾಡುವಂತಾಗಿದೆ. ರಕ್ಷಣೆಗಾಗಿ ಹಾತೊರೆಯುತ್ತಿದ್ದಾರೆ. ಅನ್ನ, ನೀರು ದೊರೆಯದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆ ಮತ್ತು ದಿನಸಿ ಅಂಗಡಿಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಯಿಂದಾಗಿ ಮರಗಳು ಉರುಳಿ ಬಿದ್ದು ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ ತಂಡಗಳು ಉರುಳಿ ಬಿದ್ದಿರುವ ಮರಗಳನ್ನು ತೆರೆವುಗೊಳಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

Related Articles

Back to top button
error: Content is protected !!