ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

Views: 69
ಉಸಿರಾಟದ ತೊಂದರೆ ಹಿನ್ನೆಲೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ್ರು ಇಂದು(ಗುರುವಾರ) ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಈಗಾಗಲೇ ಲೋಕಸಭಾ ಚುನಾವಣೆ ಹಿನ್ನಲೆ ಪಕ್ಷದ ಕಚೇರಿಯಲ್ಲಿ ಸರಣಿ ಸಭೆ ನಡೆಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆ ಮಣಿಪಾಲ ಆಸ್ಪತ್ರೆಗೆ ಇಂದು ಬೆಳಿಗ್ಗೆ ದಾಖಲಾಗಿದ್ದು, ಡಾ. ಸತ್ಯನಾರಾಯಣ ನೇತೃತ್ವದಲ್ಲಿ ಚಿಕಿತ್ಸೆ ನಡೆದಿದ್ದು, ಆರೋಗ್ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನೂ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಅವರಿಗೆ 90 ವರ್ಷ ಪೂರ್ಣಗೊಂಡಿವೆ. ಆದರೂ ಸಹ ಸಕ್ರಿಯ ರಾಜಕಾರಣದಲ್ಲಿದ್ದು, ರಾಜ್ಯ ಸಭೆ ಸದಸ್ಯರಾಗಿ, ಸದ್ಯ ಅವರು ಲೋಕಸಭೆ ಚುನಾವಣೆಯ ಪ್ರಚಾರ, ಸಭೆಗಳನ್ನು ನಡೆಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲೂ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿ ಹಾಗೂ ಲೋಕಸಭಾ ಚುನಾವಣೆ ಸಂಬಂಧ ಬೆಂಗಳೂರಿನಿಂದ ಹಾಸನಕ್ಕೆ ಹೋಗಿದ್ದರು. ಇನ್ನೂ ಇತ್ತೀಚಿಗೆ ಉದ್ಘಾಟನೆಯಾದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ದೇವೇಗೌಡ್ರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.
ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್ ಗೆ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರವನ್ನ ವಶಪಡಿಸಿಕೊಳ್ಳಲು ದಳಪತಿಗಳು ಪ್ಲಾನ್ ನಡೆಸಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಇನ್ನಿತರೆ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ
ಈ ಕುರಿತು ಮಾತನಾಡಿದ ದೇವೇಗೌಡ್ರು, ಪಕ್ಷ ಸಂಘನೆ ದೃಷ್ಟಿಯಿಂದ ಮುಂದಿನ ವಾರದಿಂದ ಮಂಡ್ಯ ಜಿಲ್ಲೆಯ ಎಲ್ಲಾ 8 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಆಗ ಎಲ್ಲಾ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆಮೇಲೆ ಅಭ್ಯರ್ಥಿ ಬಗ್ಗೆ ನಮ್ಮ ಪಕ್ಷದ ನಾಯಕರೆಲ್ಲ ಸೇರಿ ಒಂದು ಅಭಿಪ್ರಾಯಕ್ಕೆ ಬರುತ್ತೇವೆ. ನಾವು ಎನ್ ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ನಮ್ಮ ನಿರ್ಧಾರವನ್ನು ಪ್ರಧಾನಿಗಳಾದ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸುತ್ತೇವೆ. ಆಮೇಲೆ ಕುಮಾರಸ್ವಾಮಿ ಅವರು ಅವರೆಲ್ಲರ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು
ಕ್ಷೇತ್ರ ಹಂಚಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿಗಳು, ಇಲ್ಲಿ ಜೆಡಿಎಸ್ – ಬಿಜೆಪಿ ಎನ್ನುವುದಲ್ಲ. ಎನ್ ಡಿಎ ಅಷ್ಟೇ ಮುಖ್ಯ. ಅಂತಿಮವಾಗಿ ಮೋದಿ ಅವರು, ಅಮಿತ್ ಶಾ, ನಡ್ಡಾ ಮತ್ತು ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈಗಾಗಲೇ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಅವರು ಎಲ್ಲಾ ಮಾಹಿತಿ ನೀಡಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.






